ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರ, ಅನುದಾನ ಮತ್ತು ಸಿಬ್ಬಂದಿ ಒದಗಿಸಿದರೆ ಮಾತ್ರ ಸಂವಿಧಾನಾತ್ಮಕ ವಿಕೇಂದ್ರೀಕರಣ: ಎಂಎಲ್‌ಸಿ ಕಿಶೋರ್ ಕುಮಾರ್
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಮಾನ್ಯ ಉಪಾಧ್ಯಕ್ಷರಾದ ಶ್ರೀ ಡಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನ ಕುಮಾರ ಪಾರ್ಕ್‌ನ ಗಾಂಧಿ ಭವನದಲ್ಲಿ ಆಯೋಜಿಸಲಾದ “ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಸಂವಿಧಾನ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾನೂನಿನ ಆಶಯದಂತೆ ಕಾರ್ಯನಿರ್ವಹಿಸಲು ಅನುಕೂಲವಾಗುವ ವಾತಾವರಣ ಸೃಷ್ಟಿಸುವುದು” ಎಂಬ ವಿಷಯದ ಕುರಿತು ನಡೆದ ಮಹತ್ವದ ಸಭೆಯಲ್ಲಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕರು, ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಕೆಲವು ಪ್ರಮುಖ ಅಧಿಕಾರಗಳನ್ನು ಸರ್ಕಾರ ಪಟ್ಟಣ ಪಂಚಾಯತ್‌ಗಳಿಗೆ ವರ್ಗಾಯಿಸಿರುವುದರಿಂದ, ವಿಶೇಷವಾಗಿ ನಮೂನೆ 9/11, ಭೂ ಅಭಿವೃದ್ಧಿ ಹಾಗೂ ಕಟ್ಟಡ ಅನುಮೋದನೆ ಸಂಬಂಧಿಸಿದ ವಿಷಯಗಳಲ್ಲಿ ಗ್ರಾಮೀಣ ಭಾಗದ ಜನರು ಭಾರೀ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು. ಈ ರೀತಿಯ ನಿರ್ಧಾರಗಳು ವಿಕೇಂದ್ರೀಕರಣದ ಮೂಲ ಆಶಯಕ್ಕೆ ವಿರುದ್ಧವಾಗಿದ್ದು, ಗ್ರಾಮಸ್ಥರನ್ನು ಮತ್ತೆ ನಗರ ಹಾಗೂ ತಾಲೂಕು ಕೇಂದ್ರಗಳಿಗೆ ಅಲೆದಾಡುವ ಸ್ಥಿತಿಗೆ ತಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗ್ರಾಮಗಳ ಅಭಿವೃದ್ಧಿಗೆ ಸ್ವಚ್ಛ ಭಾರತ ಅಭಿಯಾನದಂತಹ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಿದ್ದು, ಅನೇಕ ಗ್ರಾಮಗಳು ಸ್ವಚ್ಛವಾಗುತ್ತಿವೆ. ಗ್ರಾಮ ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು. ಆದರೆ, ಮತ್ತೊಂದೆಡೆ ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆ ಭೂಮಿಯ ಫಲವತ್ತತೆ ಹಾಳು ಮಾಡುತ್ತಿದ್ದು, ರತ್ನಗರ್ಭ ವಸುಂಧರೆಯಾದ ನಮ್ಮ ಭೂಮಿ ನಿಧಾನವಾಗಿ ಬರಡಾಗುತ್ತಿದೆ ಎಂಬ ಆತಂಕಕಾರಿ ಸ್ಥಿತಿಯನ್ನು ಅವರು ಗಮನಕ್ಕೆ ತಂದರು.

ಇದೇ ವೇಳೆ, ಹರ್ ಘರ್ ಜಲ್ ಎಂಬ ಜಲ್ ಜೀವನ್ ಮಿಷನ್ ಮೂಲಕ ಮನೆಮನೆಗೆ ಕುಡಿಯುವ ನೀರು ಒದಗಿಸುವುದು ಅತ್ಯುತ್ತಮ ಮತ್ತು ಜನಪರ ಯೋಜನೆ ಎಂದು ಶ್ಲಾಘಿಸಿದ ಶಾಸಕರು, ಕೆಲವು ಕಡೆ ಈ ಯೋಜನೆಯ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ನೀರಿನ ಸಂಪರ್ಕ ಇದ್ದರೂ ನೀರು ಸರಬರಾಜು ಇಲ್ಲದಿರುವುದು, ತಾಂತ್ರಿಕ ದೋಷಗಳು ಹಾಗೂ ನಿರ್ವಹಣೆಯ ಕೊರತೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದು ಕೇವಲ ಅಧಿಕಾರಿಗಳ ವಿಷಯವಲ್ಲ; ಜನಪ್ರತಿನಿಧಿಗಳು, ಗ್ರಾಮಸಭೆಗಳು ಮತ್ತು ಸಾರ್ವಜನಿಕರೆಲ್ಲರೂ ಈ ಬಗ್ಗೆ ಪ್ರಶ್ನಿಸಬೇಕು ಹಾಗೂ ಸರಿಯಾದ ಅನುಷ್ಠಾನಕ್ಕೆ ಒತ್ತಾಯಿಸಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಗ್ರಾಮ ಪಂಚಾಯತ್‌ಗಳಿಗೆ ಲಭ್ಯವಾಗುವ ವಾರ್ಷಿಕ ಅನುದಾನ ಕಡಿಮೆಯಾಗುತ್ತಿರುವುದು, ಸಿಬ್ಬಂದಿ ನೇಮಕಾತಿ ನಡೆಯದಿರುವುದು, ಇದರಿಂದ ಗ್ರಾಮಸಭೆಗಳಂತಹ ಪ್ರಮುಖ ಪ್ರಜಾಸತ್ತಾತ್ಮಕ ವೇದಿಕೆಗಳು ಸ್ಥಗಿತಗೊಂಡಿರುವುದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು. ಸರ್ಕಾರ ತಕ್ಷಣ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಯಲ್ಲಿ ಮಾಡಲಾದ ಕೆಲವು ಬದಲಾವಣೆಗಳು ಗ್ರಾಮೀಣ ಜನರಿಗೆ ಮತ್ತೆ ಉದ್ಯೋಗ ಭರವಸೆ ಮೂಡಿಸಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಹೇಳಿದ ಅವರು, ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರ, ಅನುದಾನ ಮತ್ತು ಸಿಬ್ಬಂದಿ – ಈ ಮೂರನ್ನೂ ಸಮರ್ಪಕವಾಗಿ ಒದಗಿಸಿದರೆ ಮಾತ್ರ ಸಂವಿಧಾನಾತ್ಮಕ ವಿಕೇಂದ್ರೀಕರಣ ನಿಜಾರ್ಥದಲ್ಲಿ ಸಾಕಾರಗೊಳ್ಳುತ್ತದೆ ಎಂದು ಶಾಸಕರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು


















