ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ

ಬಿಸಿಲಿನ ಬೇಗೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ನೀರಿನ ಒರತೆಯ ಕೊರತೆ ಹೆಚ್ಚುತ್ತಿದೆ. ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಜೀವಜಲವಾಗಿರುವ ಪುಚ್ಚಮೊಗರು ಪಲ್ಗುಣಿ ಅಣೆಕಟ್ಟಿನಲ್ಲಿ ಜಲಧಾರೆಯು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು ಜನರು ನೀರಿಗಾಗಿ ಹಾಹಾಕಾರ ಎದುರಿಸುತಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿಯೇ ವರುಣ ದೇವ ಕರುಣೆ ತೋರಿದ್ದರಿಂದ ನೀರಿನ ಸಮಸ್ಯೆ ಕಂಡು ಬಂದಿರಲಿಲ್ಲ. ಆದರೆ ಈ ಬಾರಿ ಮಳೆರಾಯನ ಆಗಮನ ಇನ್ನೂ ಆಗಿಲ್ಲದಿರುವುದರಿಂದ ಜಲಕ್ಷಾಮ ತಲೆದೂರಿದೆ.

ನೀರಿನ ಸಮಸ್ಯೆಯು ಕಾಡುತ್ತದೆ ಎಂದು ಪುರಸಭೆಯು ಈ ಮೊದಲೇ ಅರಿತು ಕಳೆದ ಮೂರು ತಿಂಗಳಿನಿಂದ ಎರಡು ದಿನಗಳಿಗೊಮ್ಮೆ ನೀರು ಬಿಡುವ ಯೋಜನೆಯನ್ನು ಹಾಕಿಕೊಂಡಿತ್ತು. ಇತ್ತ ಮೂಡುಬಿದಿರೆಯಲ್ಲಿರುವ ಬೋರ್‍ವೆಲ್‍ಗಳ ಸ್ಥಿತಿಗತಿ, ನೀರಿನ ಒರತೆಯ ಪ್ರಮಾಣವೂ ಕುಸಿಯುತ್ತಿರುವುದರಿಂದ ಪುರಸಭೆಯು ಆತಂಕಕ್ಕೆ ಒಳಗಾಗಿದೆ. ಅಣಿಕಟ್ಟಿನ ಒಳ ಗೋಚರಿಸುತ್ತಿರುವ ಮರಳ ರಾಶಿ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿರುವ ಜನರು ಕೂಡಾ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ.

ನೀರಿನ ಸಮಸ್ಯೆ ತುಂಬಾ ಕಾಡುತ್ತಿದೆ. ಪುಚ್ಚಮೊಗರು ಅಣೆಕಟ್ಟಿನಲ್ಲಿ ನೀರು ಬತ್ತಿ ಹೋಗಿದೆ. ಹೆಚ್ಚು ನೀರಿನ ಸಮಸ್ಯೆ ಇರುವಲ್ಲಿ ಯಾರಾದರೂ ಪೋನ್ ಕರೆ ಮಾಡಿದರೆ ಪುರಸಭೆಯ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಕೆಲವು ಹೊಸ ಬೋರ್‍ವೆಲ್ ತೋಡಲು ಟೆಂಡರ್ ಸಮಸ್ಯೆಯಿದೆ ಆದರೆ, ಈಗಿನ ಸ್ಥಿತಿಯಲ್ಲಿ ಕೆಲವು ವಿಷಯಗಳಲ್ಲಿ ಜಿಲ್ಲಾಕಾರಿಗಳ ಒಪ್ಪಿಗೆ ಪಡೆದು ತುರ್ತು ಕಾರ್ಯಾಚರಣಿ ಮಾಡಬೇಕಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಲಾಗಿದ್ದು ಇನ್ನೆರಡು ದಿನಗಳಲ್ಲಿ ಸೂಚನೆ ಬರಬಹುದು ಎಂದು ಮೂಡುಬಿದಿರೆ ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಶಿವ ನಾಯ್ಕ್ ತಿಳಿಸಿದ್ದಾರೆ.

Related Posts

Leave a Reply

Your email address will not be published.