ಮೂಡುಬಿದಿರೆ: ಸುಸಜ್ಜಿತವಾದ ಪೊಲೀಸ್ ಠಾಣೆ, ಮೈನ್ ಶಾಲೆಗಳಿಗೆ ಕಟ್ಟಡಗಳ ಬೇಡಿಕೆ

ಮೂಡುಬಿದಿರೆಯ ಆರಕ್ಷಕರ ಠಾಣೆಯು ಸುಸಜ್ಜಿತವಾಗಿಲ್ಲ, ಪೊಲೀಸರಿಗೆ ಬೇಕಾಗುವ ಮೂಲಭೂತವಾದ ವ್ಯವಸ್ಥೆ ಸರಿಯಾಗಿಲ್ಲ, 60 ಸಿಬಂದಿಗಳ ಅವಶ್ಯಕತೆ ಇರುವ ಠಾಣೆಯಲ್ಲಿ ಕೇವಲ 40 ಸಿಬಂದಿಗಳಷ್ಟೇ ಇದ್ದಾರೆ, ಇದರಿಂದಾಗಿ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಶಾಸಕರ ಗಮನಕ್ಕೆ ತಂದರು.

ಶಾಸಕ ಉಮನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ನಡೆದ ಮೊದಲ ತಾಲೂಕು ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲದಿರುವುದರಿಂದ ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ವಿಳಂಬವಾಗುತ್ತಿದೆ. ಪೋಲೀಸ್ ಸಿಬಂದಿ ನೇಮಕದ ಸಮಸ್ಯೆ ಹಾಗೂ ನೊಂದ ಸಂಬಂಧಿಕರು ಆಕ್ರೋಶಕ್ಕೊಳಗಾಗುತ್ತಾರೆ. ಹೀಗಾಗಿ ವೈದ್ಯರು ಕೇಂದ್ರ ಸ್ಥಳದಲ್ಲಿಯೇ ಇರುವಂತಹ ವ್ಯವಸ್ಥೆಯಾಗಬೇಕು ಎಂದೂ ವೃತ್ತ ನಿರೀಕ್ಷಕರು ಆಗ್ರಹಿಸಿದರು.

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರ ನೇಮಕವಾಗಿದೆ. ಹೊಸ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದ್ದು ಎರಡು ವಾರದೊಳಗೆ ಕಾರ್ಯರೂಪಕ್ಕೆ ತರಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹೇಳಿದರು.

ಮೂಡುಬಿದಿರೆ ಮೈನ್ ಶಾಲೆ, ಬೆಳುವಾಯಿ ಮೈನ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು ಹೊಸ ಕಟ್ಟಡಕ್ಕೆ ಬೇಡಿಕೆಯಿಡುತ್ತಿದ್ದಾರೆ. ಶಿಕ್ಷಣ ಇಲಾಖೆ ಹೊಸ ಕಟ್ಟಡಕ್ಕೆ ಅನುಮತಿ ನೀಡುತ್ತಿಲ್ಲ. ದುರಸ್ಥಿಗೆ ಕಟ್ಟಡಗಳಿಲ್ಲ ಎಂದು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ಜಗದೀಪ್ ಶೇಟ್ ಅಸಹಾಯಕತೆ ತೋಡಿಕೊಡರು. ಹೆಚ್ಚು ವಿದ್ಯಾರ್ಥಿಗಳಿರುವಲ್ಲಿ ಹೊಸ ಕಟ್ಟಡ ನಿರ್ಮಿಸುವುದು ಅನಿವಾರ್ಯ. ಲಭ್ಯವಿರುವ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಿಸಲು ಇಲಾಖೆಯಿಂದ ಅನುಮತಿ ದೊರಕಿಸಿಕೊಡುವಂತೆ ಶಾಸಕ ಉಮನಾಥ ಕೋಟ್ಯಾನ್ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚಿಸಿದರು.

ದ.ಕ. ಕೆ.ಎಂ.ಎಫ್ ನ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು.
ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ ಬಿ, ಕುಡಿಯುವ ನೀರು ಮತ್ತು ನೈರ್ಮಲ್ಯಕರಣದ ಇಂಜಿನಿಯರ್ ಎಂ. ಶಿವಣ್ಣ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರವಾಗಿ ಹರೀಶ ಕೆ.
ಸಮಾಜ ಕಲ್ಯಾಣ ಇಲಾಖೆಯ ಪರವಾಗಿ ಪ್ರೀತಿ, ಪಶುವೈದ್ಯ ಇಲಾಖೆಯ ಡಾ. ಗುರುರಾಜ್, ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಪ್ರೋಬೆಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಲೋಕೇಶ ಸಿ. ಸ್ವಾಗತಿಸಿದರು. ಪಿಡಿಒ ಸಾಯೀಶ ಚೌಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Posts

Leave a Reply

Your email address will not be published.