ಮೂಡುಬಿದಿರೆ : ಲೋಕಾಯುಕ್ತ ಜನಸಂಪರ್ಕ ಸಭೆ – ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಮೂಡುಬಿದಿರೆ ಆಡಳಿತ ಸೌಧದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತದಿಂದ ಜನ ಸಂಪರ್ಕ ಸಭೆ ನಡೆಯಿತು. ಎಸ್‍ಪಿ ಸೈಮನ್ ಸಿ.ಎ ಹಾಗೂ ಅಧಿಕಾರಗಳ ತಂಡವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 10 ಅಹವಾಲುಗಳನ್ನು ಸ್ವೀಕರಿಸಿದರು.

ಸರ್ವೆ(2), ಕಂದಾಯ (5) ಪಂಚಾಯತ್ (1) ಪುರಸಭೆ (1) ಕೇಂದ್ರ ಲೋಕಾಯುಕ್ತ(1) ಸಹಿತ ಒಟ್ಟು 10 ದೂರುಗಳು ಬಂದಿದ್ದು ಈ ದೂರುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ದೂರುಗಳು ಇತ್ಯರ್ಥವಾಗದಿದ್ದಲ್ಲಿ ಲೋಕಾಯುಕ್ತಕ್ಕೆ ಪ್ರತ್ಯೇಕವಾಗಿ ಲಿಖಿತ ದೂರು ಸಲ್ಲಿಸುವಂತೆ ದೂರುದಾರರಿಗೆ ಸಲಹೆ ನೀಡಿದರು.

ಪುರಸಭಾ ವ್ಯಾಪ್ತಿಯ ಮಾರೂರು ಮೇಲಂತಬೆಟ್ಟುವಿನ ಗೀತಾ ಅವರಿಗೆ ಅಕ್ರಮ-ಸಕ್ರಮದಲ್ಲಿ ಜಾಗ ಮಂಜೂರಾಗಿದ್ದು ಅಲ್ಲಿ ಮನೆ ನಿರ್ಮಿಸಲಾಗಿದೆ ಆದರೆ ಅಲ್ಲಿಯೇ ಇನ್ನೋರ್ವರ ಜಾಗವಿದ್ದು ಅವರು ದಾರಿಯಲ್ಲೇ ಕಂಪೌಂಡ್ ನಿರ್ಮಿಸಿರುವುದರಿಂದ ತಮಗೆ ರಸ್ತೆ ಇಲ್ಲದಂತ್ತಾಗಿದೆ ಎಂದು ದೂರು ನೀಡಿದರು. ಈ ಬಗ್ಗೆ ಎಸಿ ಕೋಟ್ 9ಗೆ ದೂರು ನೀಡುವಂತೆ ಅಧೀಕ್ಷರು ಸಲಹೆ ನೀಡಿದರು.

ಶಿರ್ತಾಡಿ ಗ್ರಾ.ಪಂಚಾಯತ್ ಸರಿಯಾಗಿ ತೆರಿಗೆಯನ್ನು ಸರಿಯಾಗಿ ಸಂಗ್ರಹಿಸುತ್ತಿಲ್ಲ ಹಾಗೂ ಇತ್ತೀಚಿನ ಕೆಲವು ವರ್ಷಗಳಿಂದ ಪಂಚಾಯತ್ ವ್ಯಾಪ್ತಿಯಲ್ಲಿರು ವಸತಿ ಶಾಲೆಯೊಂದಕ್ಕೆ ಡೋರ್ ನಂಬರ್ ಆಗಿಲ್ಲ ಈ ಬಗ್ಗೆ ತನಿಖೆ ನಡೆಸುವಂತೆ ಪಂಚಾಯತ್ ಸದಸ್ಯ ಅರುಣ್ ಶೆಟ್ಟಿ ಅವರು ಅಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ತನಿಖೆ ನಡೆಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಯಾವತಿ ಅವರಿಗೆ ಲೋಕಾಯುಕ್ತ ಅಧಿಕಾರಿ ಸೂಚನೆ ನೀಡಿದರು.

ಬೆಳುವಾಯಿಯ ಸದಾಶಿವ ಶೆಟ್ಟಿ, ದಲಿತ ಮುಖಂಡ ನೀಲಯ್ಯ, ಸಾಮಾಜಿಕ ಕಾರ್ಯಕರ್ತ ಸದಾನಂದ ನಾರಾವಿ, ಪತ್ರಕರ್ತ ಧನಂಜಯ ಮೂಡುಬಿದಿರೆ, ಕೃಷಿಕ ಎಡ್ವರ್ಡ್ ರೆಬೆಲ್ಲೋ ಅಹವಾಲು ಸಲ್ಲಿಸಿದರು. ಲೋಕಾಯುಕ್ತ ಡಿ.ವೈ.ಎಸ್.ಪಿ ಗಳಾದ ಚೆಲುವರಾಜ್, ಕಲಾವತಿ, ನಿರೀಕ್ಷಕ ವಿನಾಯಕ ಬಿಲ್ಲವ ಉಪಸ್ಥಿತರಿದ್ದರು. ತಹಶಿಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು, ತಾ. ಪಂ ಕಾರ್ಯ ನಿರ್ವಹಣಾಧಿಕಾರಿ ದಯಾವತಿ, ಪುರಸಭೆ ಮುಖ್ಯಾಧಿಕಾರಿ ಶಿವನಾಯಕ್ ಪೊಲೀಸ್ ನಿರೀಕ್ಷಕ ಸಿದ್ದಪ್ಪ ಹಾಗೂ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡರು.

Related Posts

Leave a Reply

Your email address will not be published.