ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆಯೇರಿಕೆ ಇಳಿಸಲು,ದುಡಿಯುವ ಜನರ ಶೋಷಣೆ ತಪ್ಪಿಸಲು, ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು,ಉದ್ಯೋಗ ಸ್ರಷ್ಠಿಸಲು ಆಗ್ರಹಿಸಿ,ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ರೈತ – ಕಾರ್ಮಿಕ – ಕ್ರಷಿ ಕೂಲಿಕಾರರಿಂದ ಇಂದು ದೇಶಾದ್ಯಂತ ಪ್ರತಿಭಟನೆಯ ಭಾಗವಾಗಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CITU ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ನೀತಿ ಆಯೋಗದ ಪರಿಕಲ್ಪನೆಗಳು ಬದಲಾಗಿದ್ದರ ಪರಿಣಾಮ ಇಂದಿನ ಆರ್ಥಿಕ ನೀತಿಗಳು ಉದ್ಯೋಗರಹಿತವಾಗಿ ಜಾರಿಯಾಗುತ್ತಿವೆ. ಉತ್ಪಾದನಾ ವಲಯದಲ್ಲಿ ಇದೇ ಮೊದಲ ಬಾರಿಗೆ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಕುಸಿದಿದೆ.ಮೋದಿ ಸರಕಾರ ಎಷ್ಟೇ ಜಂಭ ಕೊಚ್ಚಿಕೊಂಡರೂ ಬಂಡವಾಳ ಹೂಡಿಕೆ ಆಗುತ್ತಿಲ್ಲ.ಉದ್ಯೋಗಸ್ಥರ ಬದಲಾಗಿ ಗುತ್ತಿಗೆ ಹೊರಗುತ್ತಿಗೆ ತಾತ್ಕಾಲಿಕ ಉದ್ಯೋಗಗಳು ಹೆಚ್ಚಾಗಿದೆ. ಬಂಡವಾಳಶಾಹಿಗಳ ಪರವಾಗಿ ಕಾರ್ಮಿಕ ಕಾನೂನುಗಳನ್ನು ಬದಲಿಸಿ ಸಂಹಿತೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜರವರು ಮಾತನಾಡಿ, ಕಳೆದ 10 ವರ್ಷಗಳ ಮೋದಿ ಸರಕಾರದ ನೀತಿಗಳು ಕಾರ್ಮಿಕ ವರ್ಗದ ಬದುಕಿನ ಮೇಲೆ ಪ್ರಹಾರಗಳನ್ನು ನಡೆಸಿದೆ.ಆದಾಯ ಕುಸಿತ, ಖಾಯಂ ಉದ್ಯೋಗಗಳ ಕುಸಿತ, ಗುತ್ತಿಗೆ ಹೊರಗುತ್ತಿಗೆ ಹಾಗೂ ಬಿಟ್ಟಿ ದುಡಿಮೆ ಹೆಚ್ಚಳ,ಕೋವಿಡ್ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರು ಅನುಭವಿಸಿದ ಸಂಕಟ ಹಾಗೂ ಕ್ರಷಿ ಬಿಕ್ಕಟ್ಟಿನ ಪರಿಣಾಮದಿಂದ ಅಸಂಘಟಿತ ಕಾರ್ಮಿಕರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ, ಸಾಮಾಜಿಕ ರಕ್ಷಣೆ ಇಲ್ಲದ ಅತಂತ್ರದ ಬದುಕು, ಯೋಜನಾ ಕಾರ್ಮಿಕರನ್ನು ಗೌರವಧನದ ಹೆಸರಲ್ಲಿ ಶೋಷಿಸುವ ನೀತಿ ತೀವ್ರಗೊಂಡಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ಒದಗಿಸಬೇಕಾದ ಕೇಂದ್ರ ಸರಕಾರ ಪ್ರತಿಯೊಂದು ಹಂತದಲ್ಲಿಯೂ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭವಾಗುವ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದರಿಂದಾಗಿ ದೇಶದ 45%ದಷ್ಟು ಸಂಪತ್ತು ಹೊಂದಿರುವ ಕೇವಲ 1% ದಷ್ಟಿರುವ ಶ್ರೀಮಂತರಲ್ಲಿ ಕೇವಲ 3% ದಷ್ಟು ಮಾತ್ರವೇ GST ಸಂಗ್ರಹ ಮಾಡಲಾಗುತ್ತಿದೆ.ಆದರೆ ದೇಶದ 50%ರಷ್ಟು ಜನರಿಂದ 65% ರಷ್ಟು GST ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ರಾಜ್ಯ ರೈತ ಸಂಘದ ನಾಯಕರಾದ ಸನ್ನಿ ಡಿಸೋಜ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಯಾದವ ಶೆಟ್ಟಿಯವರು ಮಾತನಾಡಿ, ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿದರು.

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ಸುಕುಮಾರ್,ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ಜಯಂತಿ ಶೆಟ್ಟಿ, ವಸಂತಿ ಕುಪ್ಪೆಪದವು, ರಾಧಾ ಮೂಡಬಿದ್ರೆ, ಗಿರಿಜಾ, ನೋಣಯ್ಯ ಗೌಡ, ರೋಹಿದಾಸ್,ಸುಂದರ ಕುಂಪಲ,ಬಿ.ಕೆ‌.ಇಮ್ತಿಯಾಜ್ AITUC ಜಿಲ್ಲಾ ಮುಖಂಡರಾದ ಬಿ.ಶೇಖರ್,ವಿ.ಕುಕ್ಯಾನ್,ಎಚ್.ವಿ.ರಾವ್,ಕರುಣಾಕರ್,ಸುರೇಶ್ ಕುಮಾರ್,ಸುಲೋಚನ, ರೈತ ಸಂಘಟನೆ ಗಳ ಮುಖಂಡರಾದ ಕ್ರಷ್ಣಪ್ಪ ಸಾಲ್ಯಾನ್, ಸದಾಶಿವದಾಸ್,ಓಸ್ವಾಲ್ಡ್ ಪ್ರಕಾಶ್ ಮುಂತಾದವರು ಹಾಜರಿದ್ದರು.

Related Posts

Leave a Reply

Your email address will not be published.