ಒಂದು ವಾರದ ಒಳಗೆ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ : ಎಬಿವಿಪಿ ಸಂಘಟನೆಯಿಂದ ಎಚ್ಚರಿಕೆ

ಉಡುಪಿ: ಗೊಂದಲದಿಂದ ಕೂಡಿದ ಉಡುಪಿಯ ನಿಖಿತಾಳ ಸಾವಿಗೆ ಸೂಕ್ತ ತನಿಖೆಗೆ ಆಗ್ರಹಿಸಿ ಇಂದು ಉಡುಪಿಯ ಸಿಟಿ ಆಸ್ಪತ್ರೆ ಮುಂದೆ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿದೆ. ಈ ವೇಳೆ ವೈದ್ಯರ ಮುಂದೆ ಅಸಮಾಧಾನ ಹೊರಹಾಕಿದ ಮೃತ ನಿಖಿತಾಳ ಕುಟುಂಬಸ್ಥರಿಗೆ ಇದೀಗ ಉಡುಪಿಯ ಸಿಟಿ ಆಸ್ಪತ್ರೆಯ ವೈದ್ಯರು ಯುವತಿಗೆ ನೀಡಿದ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ನಿಖಿತಾಳಿಗೆ ನ್ಯಾಯ ಒದಗಿಸಲು ಹೋರಾಟಕ್ಕೆ ಮುಂದಾದ ಎಬಿವಿಪಿ ಸಂಘಟನೆ ಆಸ್ಪತ್ರೆಯ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕು ಮತ್ತು ನಿಖಿತಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಉಡುಪಿ ಡಿಸಿ, ಡಿ ಎಚ್ ಒ ಗೆ ಒತ್ತಾಯಿಸಿದೆ. ಇದ್ಕಕಾಗಿ ಎಬಿವಿಪಿ ಒಂದು ವಾರ ಗಡುವು ನೀಡಿದೆ. ಒಂದು ವಾರದ ಒಳಗೆ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇಂದು ನಡೆದ ಪ್ರತಿಭಟನೆಯಲ್ಲಿ ಎಬಿವಿಪಿ ಸಂಘಟನೆಯೊಂದಿಗೆ ಜಿಲ್ಲಾ ಕುಲಾಲ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಹಿಂದೂ ಜಾಗರಣ ವೇದಿಕೆ ಸಂಘಟನೆ ಮುಖಂಡರು ಭಾಗಿಯಾಗಿದ್ದರು.

