ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೋಗಿಗಳಿಗಿಲ್ಲ ಇಎಸ್ಐ ಸೌಲಭ್ಯ : ಶಾಸಕ ಕಾಮತ್

ಕಾರ್ಮಿಕರ ಆರೋಗ್ಯ ವಿಮೆ (ಇಎಸ್ಐ) ಅಡಿಯಲ್ಲಿ ಚಿಕಿತ್ಸೆ ಪಡೆಯುವ ವಿಮೆದಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ವೈದ್ಯಕೀಯ ಸೌಲಭ್ಯ ಪಡೆಯುವಲ್ಲಿ ತೀವ್ರ ತೊಂದರೆಯಾಗುತ್ತಿದ್ದು ಇನ್ನೂ ಸಹ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ರವರು ಆಕ್ರೋಶ ವ್ಯಕ್ತಪಡಿಸಿದರು.

ಇಎಸ್ಐ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆ ಅವಧಿಯು ಕಳೆದ ಸಪ್ಟೆಂಬರ್ 30ನೇ ತಾರೀಕಿನಂದು ಅಂತ್ಯಗೊಂಡಿದೆ. ಹೀಗಾಗಿ ಅಕ್ಟೋಬರ್ 1 ರಿಂದ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ. ನಾವು ಇಎಸ್ಐ ಸೌಲಭ್ಯ ಹೊಂದಿದ್ದರೂ ಯಾಕೆ ಕೊಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಪ್ರಶ್ನಿಸುತ್ತಿದ್ದು, ರಾಜ್ಯ ಸರ್ಕಾರದ ತಪ್ಪಿಗೆ ಅಧಿಕಾರಿಗಳು ಪರಿತಪಿಸುವಂತಾಗಿದೆ. ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೂ ಮನವಿ ಮಾಡಲಾಗಿದೆ ಎಂದರು.

ರಾಜ್ಯ ಸರ್ಕಾರ ನಿಗದಿತ ಮೊತ್ತವನ್ನು ಪಾವತಿಸಿ ಸೂಕ್ತ ಕ್ರಮ ಕೈಗೊಂಡಿದ್ದರೆ ರೋಗಿಗಳು ಇಂದು ಪರದಾಡುವ ಸ್ಥಿತಿ ಬರುತ್ತಿರಲಿಲ್ಲ. ಇದೇ ವೇಳೆ ಕೇಂದ್ರ ಸರ್ಕಾರದಿಂದ ನೀಡಲ್ಪಡುವ ವೈದ್ಯಕೀಯ ಚಿಕಿತ್ಸೆ ಸೌಲಭ್ಯಗಳು ಮುಂದುವರಿದಿದ್ದು, ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಚಿಕಿತ್ಸೆಗಳು ಮಾತ್ರ ಸಿಗದೇ ರೋಗಿಗಳಿಗೆ ತೊಂದರೆಯಾಗಿದೆ. ಆ ಮೂಲಕ ಲಕ್ಷಾಂತರ ಕಾರ್ಮಿಕರ ಆರೋಗ್ಯದ ವಿಷಯದಲ್ಲಿ ಚೆಲ್ಲಾಟವಾಡುತ್ತಿರುವುದನ್ನು ಬಿಟ್ಟು, ಇಎಸ್ಐ ಎಂಬುದು ಕಾರ್ಮಿಕರ ಹಕ್ಕು ಹಾಗೂ ಸಾಮಾಜಿಕ ಭದ್ರತೆಯ ಅಂಶವೆಂಬುದನ್ನು ಮನಗಂಡು ಈ ಕೂಡಲೇ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರು ಆಗ್ರಹಿಸಿದರು

Related Posts

Leave a Reply

Your email address will not be published.