ಅಡ್ಡಹೊಳೆ: ಪಿಕಪ್ ಡಿಕ್ಕಿ – ಮಹಿಳೆ ಮೃತ್ಯು
ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಬಳಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರಿಗೆ ಪಿಕಪ್ ವಾಹನ ಡಿಕ್ಕಿಯಾಗಿ ಅವರು ಮೃತಪಟ್ಟ ದುರ್ಘಟನೆ ಜ.8ರಂದು ಸಂಜೆ ಸಂಭವಿಸಿದೆ.

ಶಿರಾಡಿ ಗ್ರಾಮದ ಅಡ್ಡಹೊಳೆ ಅಂಬೇಡ್ಕರ್ ಕಾಲೋನಿ ನಿವಾಸಿ ದಿ.ಬಾಬು ಅವರ ಪತ್ನಿ ಲೀಲಾ (59) ಮೃತ ಮಹಿಳೆಯಾಗಿದ್ದಾರೆ. ಲೀಲಾ ಅವರು ಕೂಲಿ ಕೆಲಸ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಬದಿ ನಡೆದುಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭ ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಹಾಸನ ನಿವಾಸಿ ರಮೇಶ್ ಎಂಬವರು ಚಾಲನೆ ಮಾಡುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ಲೀಲಾ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


















