ರಾಜಕೀಯ ಶುದ್ಧೀಕರಣಕ್ಕೆ ಬರುವುದಾದರೆ ಎಲ್ಲರಿಗೂ ಸ್ವಾಗತ: ಡಿವಿಎಸ್

ರಾಜಕೀಯ ಶುದ್ಧೀಕರಣದ ಬಗ್ಗೆ ಸ್ವಂತ ತೀರ್ಮಾನ ತೆಗೆದುಕೊಳ್ಳಲು ನನ್ನಿಂದ ಸಾಧ್ಯ, ಆದರೆ, ಸಮಾನ ಮನಸ್ಕರಾಗಿ ನನ್ನೊಂದಿಗೆ ಕೈಜೋಡಿಸಲು ಯಾರಾದರೂ ಬರುವುದಾದರೆ ಎಲ್ಲರಿಗೂ ಸ್ವಾಗತ ಎಂದು ಸಂಸದ, ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ ಹೇಳಿದರು.
ಅವರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುಂಪುಗಾರಿಕೆಗಳಿದ್ದವು. ದೆಹಲಿ ಬಣ ಹಾಗೂ ಕರ್ನಾಟಕ ಬಣಗಳಿದ್ದವು. ಆದ್ರೆ ನಮ್ಮದು ಬಿಜೆಪಿ ಬಣಕ್ಕೆ ಗೌರವ ಸಿಗಲಿಲ್ಲ. ನಿಮ್ಮ ಗುಂಪುಗಾರಿಕೆಯ ರಾಜಕಾರಣಕ್ಕೆ ಓಟು ಕೊಡಲ್ಲ ಎಂದರು.
ಚುನಾವಣಾ ರಾಜಕೀಯದಿಂದ ದೂರ ಇದ್ದೇನೆ. ಆದರೆ ರಾಜಕೀಯದಿಂದ ದೂರ ಉಳಿಯಲ್ಲ. ನರೇಂದ್ರ ಮೋದಿಯವರದ್ದು, ಸ್ವಾರ್ಥರಹಿತ ರಾಜಕಾರಣ. ನರೇಂದ್ರ ಮೋದಿಯವರನ್ನು ಫಾಲೋ ಮಾಡಿಕೊಂಡು ಉಳಿದವರು ಮುಂದುವರಿಯಬೇಕು. ಎಲ್ಲಾ ರಾಜ್ಯಗಳಲ್ಲೂ ನರೇಂದ್ರ ಮೋದಿಯವರಂತೆ ಉಳಿದವರು ಕೆಲಸ ಮಾಡಬೇಕು. ನರೇಂದ್ರ ಮೋದಿಯವರು ಹೇಳಿದಂತೆ ಪರಿವಾರದಿಂದ ಮತ್ತು ಭ್ರಷ್ಟಾಚಾರದಿಂದ ಮುಕ್ತರಾಗಬೇಕು. ಈಗ ನರೇಂದ್ರ ಮೋದಿಯವರ ಚುನಾವಣೆ ಮಾತ್ರ ನಮ್ಮ ಮುಂದಿದೆ. ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಹಾನೆಸ್ಟಿ ಹಾಗೂ ಸಿನ್ಸಿಯಾರಿಟಿ ಅರ್ಥ ಕಳೆದುಕೊಂಡಿದೆ. ಲೋಕಸಭಾ ಚುನಾವಣೆ ಮುಗಿಯುವ ವರೆಗೆ ಎಲ್ಲಾ ನೋವುಗಳನ್ನು ನುಂಗಿ ಕೂರುತ್ತೇನೆ ಎಂದು ಡಿ.ವಿ. ಸದಾನಂದ ಗೌಡ ಹೇಳಿದರು.