ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ
ಬಂಟರ ಸಂಘಗಳ ವತಿಯಿಂದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಕಾರ್ಯಕ್ರಮವು ಪುತ್ತೂರಿನಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಮಾರ್ಗದರ್ಶನದಲ್ಲಿ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘಗಳ ಸಹಯೋಗದೊಂದಿಗೆ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ನಡೆಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಶೋಕ್ ಕುಮಾರ್ ರೈ ಅವರು, ಇಂದು ನಾನು ಶಾಸಕನಾಗಲು ಬಂಟ ಸಮುದಾಯ ಸಂಪೂರ್ಣ ಆಶೀರ್ವಾದವೇ ಕಾರಣ. ಇತರ ಸಮುದಾಯದವರಿಗೆ ಸ್ಪಂದನೆ ನೀಡುವ ಜತೆಗೆ ಒಂದಲ್ಲಾ ಒಂದು ದಿನ ಬಂಟ ಸಮುದಾಯವನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತೇನೆ. ಈ ನಿಟ್ಟಿನಲ್ಲಿ ಸರಕಾರದಿಂದ ಬರುವ ಅನುದಾನವನ್ನು ಪ್ರಾಮಾಣಿಕವಾಗಿ ಬಳಸಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.
ಮಂಗಳೂರು ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಕುಮಾರ್ ರೈ ಮಾಲಾಡಿ, ಶಾಸಕರಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಬಂಟ ಸಮುದಾಯದಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕಾನೂನು, ನ್ಯಾಯದ ಚೌಕಟ್ಟಿನಲ್ಲಿ ಶಾಸಕರು ಕೆಲಸ ಮಾಡಬೇಕಿದ್ದು, ಇತರ ಸಮಾಜದವರ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ಬಂಟ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಶೋಕು ಕುಮಾರ್ ರೈ, ಪತ್ನಿ ಸುಮಾ ಎಸ್. ರೈ ಹಾಗೂ ಇಬ್ಬರು ಪುತ್ರಿಯರು, ಓರ್ವ ಪುತ್ರರ ಜತೆಯಾಗಿ ಶಾಲು ಹೊದಿಸಿ, ಫಲಪುಷ್ಪ ನೀಡಿ, 5.6 ಫೀಟ್ ಎತ್ತರದ ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಬಂಟ ಸಮಾಜದಿಂದ ಅತೀ ಹೆಚ್ಚು ಅಂಕ ಪಡೆದವರನ್ನು ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ ನೀಡಲಾಯಿತು. ಜು.21 ರಂದು ಪುತ್ತೂರಿನಲ್ಲಿ ನಡೆಯುವ ತುಳುವರ ಬಂಟರ ಪರ್ಬ-2023 ಲೋಗೋವನ್ನು ಶಾಸಕ ಅಶೋಕ್ ಕುಮಾರ್ ರೈ ಅನಾವರಣಗೊಳಿಸಿದರು.
ಅಭಿನಂದನಾ ಸಮಾರಂಭದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವೇದಿಕೆಯಲ್ಲಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಅಭಿನಂದನಾ ಪತ್ರ ವಾಚಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ,ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಸೀತಾರಾಮ ರೈ,ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಅಧ್ಯಕ್ಷರಾದ ಯನ್.ಜಗನ್ನಾಥ ರೈ ಮಾದೋಡಿ ಉಪಸ್ಥಿತರಿದ್ದರು.