ಮಂಜೇಶ್ವರ : ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋದ ಡಾಮರು

ಮಂಜೇಶ್ವರ ಗ್ರಾಮ ಪಂಚಾಯತ್‍ನ ಎರಡನೇ ವಾರ್ಡು ವ್ಯಾಪ್ತಿಯಲ್ಲಿರುವ ತೂಮಿನಾಡು ಮಹಾಕಾಳಿ ರಸ್ತೆ, ಕಳಪೆ ಕಾಮಗಾರಿಯಿಂದ ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋಗಿದೆ. ಕಳಪೆ ಮತ್ತು ಅರೆಬರೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ವಿರುದ್ಧ ವ್ಯಾಪಕ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಮಂಜೇಶ್ವರ ಗ್ರಾಮ ಪಂಚಾಯತ್ ಫಂಡ್‍ನಿಂದ 3 ಲಕ್ಷ ರೂ. ಖರ್ಚಿನಲ್ಲಿ ನಿರ್ಮಾಣಗೊಂಡ 120 ಮೀಟರ್ ಅಂತರದ ರಸ್ತೆ ಇದೀಗ ತಿಂಗಳಾಗುವ ಮೊದಲೇ ಕಿತ್ತು ಹೋಗಿದೆ. ರಸ್ತೆ ಒಂದು ಭಾಗ ಬಿರುಕು ಬಿಟ್ಟಿದ್ದು, ವಾಹನಗಳು ಹಾದು ಹೋದಾಗ ಮತ್ತಷ್ಟು ಬಿರುಕು ಕಾಣಿಸಿಕೊಂಡಿದ್ದು ಇನ್ನು ಸರಿಯಾದ ಮಳೆ ಸುರಿದರೆ ಸಂಪೂರ್ಣವಾಗಿ ಕುಸಿದು ಹೋಗುವ ಲಕ್ಷಣಗಳು ಕಾಣಿಸುತ್ತಿವೆ.

ರಸ್ತೆಗೆ ನೆಪಕ್ಕೆ ಒಂದಿಷ್ಟು ಜಲ್ಲಿ ಹಾಕಿ ಡಾಂಬರು ಹರಡಿ ಗುತ್ತಿಗೆದಾರ ಕೈಚೆಲ್ಲಿದ್ದಾನೆ. ಸಣ್ಣ ವಾಹನ ಓಡಾಡಿದರೂ ರಸ್ತೆ ಗುಂಡಿ ಬೀಳುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ನಡೆಯುವಾಗ ಪಂಚಾಯತ್ ಇಂಜಿನಿಯರಾಗಲೀ ಅಥವಾ ವಾರ್ಡ್ ಸದಸ್ಯೆಯಾಗಲೀ ಇತ್ತ ಕಡೆ ಗಮನ ಹರಿಸದೇ ಇದ್ದದ್ದು ಗುತ್ತಿಗೆದಾರನಿಗೆ ವರದಾನವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಅಂಗನವಾಡಿ, ದೇವಸ್ಥಾನ ಸೇರಿದಂತೆ ನೂರಕ್ಕೂ ಹೆಚ್ಚು ಕುಟುಂಬಗಳು ಆಶ್ರಯಿಸುತ್ತಿರುವ ಈ ರಸ್ತೆಯನ್ನು ಕೂಡಲೇ ಪುನರ್ ನವೀಕರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
