ಪುತ್ತೂರು: ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಸಚಿವ ರಮಾನಾಥ ರೈ
ಪುತ್ತೂರು: ಪುತ್ತೂರು ನಗರದ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು 72ನೇ ಹುಟ್ಟು ಹಬ್ಬವನ್ನು ವಿನೂತನವಾಗಿ ಆಚರಿಸಿಕೊಂಡರು.
ಆಶ್ರಮದಲ್ಲಿನ ವಿಶೇಷ ಚೇತನರೊಂದಿಗೆ ಸಹಭೋಜನ ನಡೆಸಿ ತನ್ನ ಹುಟ್ಟು ಹಬ್ಬ ಆಚರಿಸಿದ ರಮಾನಾಥ ರೈ ಅವರು, ನನ್ನ ರಾಜಕೀಯ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದು, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತಾ ಬಂದಿದ್ದೇನೆ. ಇಲ್ಲಿನ ಜನರು ನನಗೆ ನೀಡಿರುವ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದರು.
ಈ ಸಂದರ್ಭದಲ್ಲಿ ರಮಾನಾಥ ರೈ ಅವರ ಹುಟ್ಟು ಹಬ್ಬದ ಅಂಗವಾಗಿ ಪಕ್ಷದ ಕಾರ್ಯಕರ್ತ ರೋಶನ್ ರೈ ಬನ್ನೂರು ಅವರ ನೇತೃತ್ವದಲ್ಲಿ ಪ್ರಜ್ಞಾ ಆಶ್ರಮದಲ್ಲಿ ನೂತನವಾಗಿ ಅಳವಡಿಸಲಾಗಿದ್ದ ರೂ. 50 ಸಾವಿರ ವೆಚ್ಚದ ಇಂಟರ್‍ಲಾಕ್‍ನ್ನು ರಮಾನಾಥ ರೈ ಅವರು ಉದ್ಘಾಟಿಸಿದರು. ಆಶ್ರಮದಲ್ಲಿರುವ ವಿಶೇಷ ಚೇತನರಿಗೆ ಹೊಸ ಬಟ್ಟೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ,ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ,ಕೆಪಿಸಿಸಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಡಾ. ರಘು ಬೆಳ್ಳಿಪ್ಪಾಡಿ ಮೊದಲಾದವರು ಭಾಗವಹಿಸಿದ್ದರು.