ಒಣಗುತ್ತಿರುವ ಗಣರಾಜ್ಯ ತತ್ವಗಳು || Republic Day

ಗಣರಾಜ್ಯ ಎನ್ನುವುದು ಹಳೆಯ ಕಲ್ಪನೆ. ಅದರ ಆಧುನಿಕ ರೂಪವೇ ಪ್ರಜಾಪ್ರಭುತ್ವ. ಸೆಪ್ಟೆಂಬರ್ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಆಯಿತು. 2023ರ ಅಂದು ಸಂವಿಧಾನದ ಪೀಠಿಕೆ ಓದುವ ದೊಡ್ಡ ಆಂದೋಲನವೇ ನಡೆಯಿತು. ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದರೂ ಗಣರಾಜ್ಯ ಇಲ್ಲವೇ ಪ್ರಜಾಪ್ರಭುತ್ವ ದೇಶವಾದುದು 1950ರ ಜನವರಿ 26ರಂದು. ಆದ್ದರಿಂದ ಈ ದಿನ ದೇಶದ ಪ್ರಜಾಪ್ರಭುತ್ವ ದಿನ, ಗಣರಾಜ್ಯೋತ್ಸವ ದಿನ ಎನ್ನುವುದು ಸಹ ರೂಢಿ. ಈ ಸಂವಿಧಾನವನ್ನು ಎರಡು ವರುಷದಷ್ಟು ಕಾಲ ಚರ್ಚಿಸಿ ಪಾಸ್ ಮಾಡಿದ ಕಾನ್‍ಸ್ಟಿಯೆನ್ಸ್ ಎಸೆಂಬ್ಲಿಯು ಈ ಸಂವಿಧಾನದ ಕಾರಣಕ್ಕೆ ಮರು ದಿನದಿಂದಲೇ ಪಾರ್ಲಿಮೆಂಟ್ ಇಲ್ಲವೇ ಸಂಸತ್ತು ಎನಿಸಿಕೊಂಡಿತು.

ಇದು ಸಂವಿಧಾನದ ಬಲ. ಸಾಂವಿಧಾನಿಕ ವಿಧಾನ ಭಾರತಕ್ಕೆ ತೀರಾ ಹೊಸತಲ್ಲ. ಪ್ರಜಾಪ್ರಭುತ್ವ ಸಹ ಹೊಸತಲ್ಲ. ಪ್ರತಿಯೊಂದು ರಾಜ್ಯ ಮತ್ತು ಸಮುದಾಯಗಳು ತಮ್ಮದೇ ಕಟ್ಟು ಕಟ್ಟಳೆ ಹೊಂದಿರುತ್ತವೆ. ಅವು ಅವರದೇ ಸಂವಿಧಾನಗಳು. ಇವತ್ತಿಗೂ ಜಾಟ್ ಜನರ ಖಾಪ್ ಪಂಚಾಯತ್‍ಗಳು ಕಾನೂನು ಮೀರಿ ತಮ್ಮದೇ ತೀರ್ಪು ನೀಡುವುದನ್ನು ಕಾಣುತ್ತಿದ್ದೇವೆ. ಬುದ್ಧ ಕಾಲದಲ್ಲಿ ಇದ್ದ ಜನಪದ ಮತ್ತು ಮಹಾ ಜನಪದಗಳಲ್ಲಿ ಗಣರಾಜ್ಯ ವ್ಯವಸ್ಥೆ ಇತ್ತು. ಆದರೆ ಅದು ರಾಜಪ್ರಭುತ್ವದೊಳಗಿನ ಜನಮತದ ಜನಪದಗಳು ಎನ್ನಬಹುದು. ಭಾರತದಲ್ಲಿ ಬ್ರಿಟಿಷರ ಆಡಳಿತದಲ್ಲಿ ತೆರಿಗೆ ಕಟ್ಟುವವರಿಗೆ ಮಾತ್ರ ಮತದಾನದ ಹಕ್ಕು ಇದ್ದ ಒಂದು ಅರೆ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ರೋಮನ್ ಸಾಮ್ರಾಜ್ಯದಲ್ಲಿ ಬಹುತೇಕ ಈ ಮಾದರಿಯ ಸಿರಿವಂತರ ಆಯ್ಕೆಯ ಗಣರಾಜ್ಯ ಪದ್ಧತಿ ಇತ್ತು.

ಪುರಾತನ ಗಣರಾಜ್ಯ ವ್ಯವಸ್ಥೆ ಎಂದರೆ ಗ್ರೀಸ್‍ನದು ಮತ್ತು ಸ್ವಿಜರ್ಲ್ಯಾಂಡ್‍ನದು ಎನ್ನಲಾಗಿದೆ. ಗ್ರೀಸ್ ದೇಶದ ತತ್ವಜ್ಞಾನಿ ಪ್ಲೇಟೋ ಜನ ಪ್ರಭುತ್ವದ ಬಗೆಗೆ ಬರೆದ ಪುಸ್ತಕವೇ ರಿಪಬ್ಲಿಕ್. ಅದು ಆಧುನಿಕ ಪ್ರಜಾಪ್ರಭುತ್ವಕ್ಕೆ ಮೂಲ ತಳಪಾಯ. ರಿಪಬ್ಲಿಕ್ ಎಂದರೆ ಗಣರಾಜ್ಯ. ಗಣ ಎಂದರೆ ಜನಗುಂಪು. ಜನಗುಂಪು ಮತಾಭಿಪ್ರಾಯ ಇಲ್ಲಿ ನಿರ್ಣಾಯಕ. ಜನರಿಂದ ಜನರಿಗಾಗಿ ಜನರ ಸರಕಾರ ಎನ್ನಬಹುದು. ಆದರೆ ಗೆದ್ದವರು ಜನರಿಂದ ತಮ್ಮ ಜನರಿಗಾಗಿ ಧನ ಜನರ ಸರಕಾರ ಮಾಡಿದ್ದಾರೆ. ಜನರ ಸರಕಾರ ಎಂದರೆ ಜನತಾ ಸರಕಾರ. ಈಗಿನ ಭಾರತದ ಆಡಳಿತಗಾರರಿಗೆ ಅದು ಭಾರತೀಯ ಜನತಾ ಸರಕಾರ. ಚುನಾವಣೆಗೆ ಸಜ್ಜಾಗಿರುವುದರಿಂದ ಕೆಲವರಿಗೆ ಅದು ಇಂಡಿಯಾ ಸರಕಾರ. ಸಂವಿಧಾನವು ಇಂಡಿಯಾ ಶಬ್ದಕ್ಕೆ ಒತ್ತು ನೀಡಿದೆ; ಭಾರತ ಎಂದಿದೆ. ಆದರೆ ಅದು ಇಂಗ್ಲಿಷ್‍ನಲ್ಲಿ ಇದೆ.

ಭೀಮ್‍ಜಿ ರಾಮ್‍ಜಿ ಅಂಬೇಡ್ಕರ್ ಅವರ ಇಂಗ್ಲಿಷ್ ಜ್ಞಾನಕ್ಕೆ ಕೆಲವು ಇಂಗ್ಲಿಷರೇ ಕಕ್ಕಾಬಿಕ್ಕಿ ಆಗುತ್ತಿದ್ದರು ಎನ್ನಲಾಗಿದೆ. ಮಧ್ಯ ಕಾಲದಲ್ಲಿ ಇಟೆಲಿಯಲ್ಲಿ ಗಣರಾಜ್ಯಗಳು ಕಾಣಿಸಿದವು. ಅವುಗಳಲ್ಲಿ ವೆನಿಸ್, ಫೆÇ್ಲೀರೆನ್ಸ್ ಗಣರಾಜ್ಯಗಳನ್ನು ಆಧುನಿಕ ಪ್ರಜಾಪ್ರಭುತ್ವದ ಒಂದು ಗಟ್ಟಿ ಗೋಡೆ ಎನ್ನಬಹುದು. ಆಧುನಿಕವಾಗಿ ಫ್ರಾನ್ಸ್ ಮತ್ತು ಅಮೆರಿಕದಲ್ಲಿ ರಾಜ ಪ್ರಭುತ್ವದ ವಿರುದ್ಧ ಕ್ರಾಂತಿ, ಹೋರಾಟ ನಡೆದು ಗಣರಾಜ್ಯಗಳು ಸ್ಥಾಪನೆ ಆದವು. ಭಾರತ ಸಹಿತ ಹಲವು ದೇಶಗಳು ವಸಾಹತು ನೊಗ ಕಳಚಿಕೊಂಡ ಮೇಲೆ ಪ್ರಜಾಪ್ರಭುತ್ವ ದೇಶಗಳು ಎನಿಸಿದವು. ಕಮ್ಯೂನಿಸ್ಟ್ ದೇಶಗಳಲ್ಲಿ ಕಮ್ಯೂನ್ ಮಟ್ಟದಲ್ಲಿ ಜನಮತ ಇರುವುದರಿಂದ ಅವುಗಳನ್ನು ಜನತಾ ಗಣರಾಜ್ಯಗಳು ಎನ್ನಲಾಗಿದೆ. ಕಮ್ಯೂನ್ ಎನ್ನುವುದು ಜನಪದಕ್ಕೆ ಸಮಾನ. ನೇಪಾಳದಲ್ಲಿ ರಾಜಸತ್ತೆ ಕಳಚಿದ್ದು ಕಮ್ಯೂನಿಸ್ಟ್ ಚಳವಳಿ. ಆದರೆ ಅಲ್ಲಿನದು ಪಕ್ಕಾ ಪ್ರಜಾಪ್ರಭುತ್ವ ವ್ಯವಸ್ಥೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಲಕ್ಷಣ ಚುನಾವಣೆ.

ಪ್ರಜಾಪ್ರಭುತ್ವ ದೇಶಗಳಲ್ಲಿ ಚುನಾಯಿತ ಸರಕಾರಗಳು ಸಂವಿಧಾನ ನಿಶ್ಚಿತ ಅವಧಿಯ ತನಕ ಆಡಳಿತ ನಡೆಸುತ್ತವೆ. ಅನಂತರ ಹೊಸ ಚುನಾಯಿತ ಸರಕಾರ ಬರುತ್ತದೆ. ಅದರಲ್ಲಿ ಹಳೆಯ ಮುಖಗಳದ್ದೇ ದರಬಾರು ಪ್ರಜಾಪ್ರಭುತ್ವ ವ್ಯವಸ್ಥೆಯ ಅನಿವಾರ್ಯಗಳಲ್ಲಿ ಒಂದು. ಪಕ್ಷಾಂತರಗಳು ಕೂಡ ಕಾಲಕ್ಕೆ ತಕ್ಕಂತೆ ಅಭಿಪ್ರಾಯಗಳು ಬದಲಾಗುವುದರ ಲಕ್ಷಣವಾಗಿದೆ. ಆದರೆ ನಿರಂತರ ಗೋಡೆ ಹಾರುವ ನಿತೀಶ್ ಕುಮಾರ್, ಮೊನ್ನೆ ಬಂದು ಇಂದು ಮತ್ತೆ ವಾಪಾಸಾದ ಜಗದೀಶ್ ಶೆಟ್ಟರ್ ಮಾದರಿಯ ಪಕ್ಷಾಂತರಗಳನ್ನು ಪ್ರಜಾಪ್ರಭುತ್ವದ ಅಣಕ ಎನ್ನಬಹುದು. ಅವರಾದಿ ವೀರಪ್ಪನು ಬ್ರಿಟಿಷರ ಜೊತೆಗೆ ಕೈಜೋಡಿಸಿ, ಮಲ್ಲಪ್ಪ ಶೆಟ್ಟಿಯನ್ನು ಕೈಗೆ ಹಾಕಿಕೊಂಡು ಕಿತ್ತೂರು ಪತನಕ್ಕೆ ಕಾರಣನಾದ. ಮಂತ್ರಿ ಮಲ್ಲಪ್ಪ ಶೆಟ್ಟಿಯ ವರ್ತನೆಯು ಈಗಿನ ಸಾಕಷ್ಟು ಪಕ್ಷಾಂತರಿಗಳಲ್ಲಿ ಕಂಡು ಬರುತ್ತದೆ.

ಬ್ರಿಟನ್ನಿನಲ್ಲಿ ಆಲಿವರ್ ಕ್ರಾಮ್‍ವೆಲ್ ಹೋರಾಟದ ಮೂಲಕ ಅಧಿಕಾರ ವಹಿಸಿಕೊಂಡು. ಕಾಮನ್‍ವೆಲ್ತ್ ಸರಕಾರ ಎಂದು ಕರೆದ. ಕಾಮನ್‍ವೆಲ್ತ್ ಎಂದರೆ ಎಲ್ಲರ, ಎಲ್ಲ ಜನಸಾಮಾನ್ಯರಿಗೆ ಒಳಿತು ಮಾಡುವ ಸರಕಾರ. ಈ ಪದ್ಧತಿಯೇ ಜಗತ್ತಿನ ಬಹುತೇಕ ಕಡೆಗೆ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುಟ್ಟಿಸಿದ್ದಾಗಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಸರ್ವಾಧಿಕಾರಿ ಧೋರಣೆ ತೋರಿ ಬರಬಹುದು. ಜರ್ಮನಿ, ಇಟೆಲಿ, ಸ್ಪೆಯಿನ್‍ಗಳಲ್ಲಿ 20ನೇ ಶತಮಾನದ ಮೊದಲಾರ್ಧದಲ್ಲಿ ಚುನಾಯಿತ ಸರಕಾರಗಳು ನಿರಂಕುಶಾಡಳಿತ ಸರಕಾರಗಳು ಎನಿಸಿ ನಾಶವಾದವು. ಈಗಿನ ಮ್ಯಾನ್ಮಾರ್, ನೆರೆಯ ಪಾಕಿಸ್ತಾನ ಸರ್ವಾಧಿಕಾರಿ ಧೋರಣೆಯ ಮಿಲಿಟರಿ ಆಡಳಿತವನ್ನು ಕಂಡಿವೆ, ಕಾಣುತ್ತಿದೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಇಂದಿರಾ ಗಾಂಧಿಯವರ ಸರಕಾರವನ್ನು ಪ್ರತಿಪಕ್ಷಗಳು ಸರ್ವಾಧಿಕಾರಿ ಎಂದು ಕರೆದವು. ಈಗಿನ ಪ್ರತಿಪಕ್ಷಗಳು ಪ್ರಧಾನಿ ಮೋದಿಯವರ ಸರಕಾರವನ್ನು ತುರ್ತು ಪರಿಸ್ಥಿತಿ ಘೋಷಣೆ ಮಾಡದ ತುರ್ತು ಪರಿಸ್ಥಿತಿ ತಂದಿರುವ ಸರ್ವಾಧಿಕಾರಿ ಧೋರಣೆಯ ಸರಕಾರ ಎನ್ನುತ್ತಿವೆ.

ಸಂವಿಧಾನದ 7ನೆಯ ಶೆಡ್ಯೂಲ್ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ಅಧಿಕಾರ ಮತ್ತು ಕಾನೂನು ಪರಿಮಿತಿಗಳನ್ನು ಹೇಳುತ್ತವೆ. ಆದರೆ ರಾಜ್ಯಗಳ ವ್ಯಾಪ್ತಿಯ ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಿದ್ದುಪಡಿಯ ಮೂಲಕ ಮೋದಿಯವರ ಸರಕಾರವು ಮೂಗು ತೂರಿಸಿದೆ. ಸಂವಿಧಾನವು ಯೂನಿಯನ್ ಗವರ್ನಮೆಂಟ್ ಅರ್ಥಾತ್ ಒಕ್ಕೂಟ ಸರಕಾರ ಎಂದಿದ್ದರೂ ಕೇಂದ್ರ ಸರಕಾರ ಎಂಬುದು ಹೇಗೆ ರೂಢಿಗೆ ಬಂತು ಎಂದು ತಿಳಿಯುವುದಿಲ್ಲ. ಒಕ್ಕೂಟ ಸರಕಾರವಾಗಿ ಆಳುವವರ ಉಡ ಹಿಡಿತದ ಧೋರಣೆಯು ಈ ಶಬ್ದ ಬಳಕೆಯ ಹಿಂದೆ ಇರಬಹುದು. ಕರ್ನಾಟಕ ಸರಕಾರವು ಪ್ರಜಾಪ್ರಭುತ್ವ ದಿನಾಚರಣೆಯ ವೇಳೆ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ ಎಂದು ಆದೇಶ ನೀಡಿತ್ತು. ಕೆಲವು ಅಧಿಕಾರಿಗಳು ಹಿಂದೆ ಇದನ್ನು ಮುರಿದುದಿದೆ. ಈ ಸಂವಿಧಾನ ರಚನೆ ಬಹು ಕ್ಲಿಷ್ಟ ದಾರಿಯದಾಗಿತ್ತು.

ಸಂವಿಧಾನದ ಮೂಲಕ ಮೀಸಲಾತಿ ಸಿಕ್ಕಿದೆ ಎಂದು ಬಯ್ಯುವವರು ಮತ್ತು ಮೀಸಲಾತಿ ಲಾಭ ದಕ್ಕಿದೆ ಎಂದು ಹೊಗಳುವವರು ಇಬ್ಬರೂ ಆ ಮೀಸಲಾತಿಯ ಮರ್ಮ ತಿಳಿದಿಲ್ಲ. ಸಂವಿಧಾನವು ಇಡೀ ದೇಶದ ಕೈಪಿಡಿ, ಪ್ರಜಾಪ್ರಭುತ್ವದ ಕನ್ನಡಿ. ಮೀಸಲಾತಿ ಅದರಲ್ಲಿ ಒಂದು ಅಂಶ. ಅದು ಸಾಮಾಜಿಕ ನ್ಯಾಯದ ಆಶಯ.
ಮೀಸಲಾತಿಯದು ದೀರ್ಘ ಚರಿತ್ರೆ. ದಲಿತರಿಗೆ ಅಂಬೇಡ್ಕರ್‍ರ ಸಂವಿಧಾನ ಮೀಸಲಾತಿ ನೀಡಿದೆ ಎಂಬುದು ಮೇಲಿನ ಸತ್ಯ ಮಾತ್ರ. 170- 160 ವರುಷಗಳ ಹಿಂದೆ ಮಹಾತ್ಮಾ ಜ್ಯೋತಿಬಾ ಫುಲೆ ಅವರು ಬ್ರಿಟಿಷರಿಗೆ ಬರೆದ ಸರಣಿ ಪತ್ರಗಳು ಇದಕ್ಕೆ ಮೂಲ. ಮೇಲ್ಜಾತಿಯವರಿಗೆ ಮಾತ್ರ ಕೆಲಸ, ಕಲಿಕೆ ಮತ್ತು ಸ್ಕಾಲರ್‍ಶಿಪ್ ಸಲ್ಲ, ಜನಸಂಖ್ಯೆ ಆಧಾರದಲ್ಲಿ ಎಲ್ಲ ಜಾತಿಯವರಿಗೂ ಅನುಕೂಲ ಸಿಗುವಂತೆ ಮಾಡಿ, ಮೀಸಲಾತಿ ಇರಲಿ ಎಂಬುದು ಆ ಪತ್ರ ವ್ಯವಹಾರಗಳ ತಾತ್ಪರ್ಯ. ಹಾಗಾಗಿ ಕೊಲ್ಲಾಪುರದ ಶಾಹು ಮಹಾರಾಜರು ಮತ್ತು ಅಂಬೇಡ್ಕರ್‍ರು ಮುಂದೆ ಫುಲೆಯವರನ್ನು ಗುರು ಸಮಾನ ಮಾಡಿಕೊಂಡರು. ಶಾಹು ಮಹಾರಾಜರು ದೇಶದಲ್ಲೇ ಮೊದಲ ಬಾರಿಗೆ ಅವರ ರಾಜ್ಯದಲ್ಲಿ ಮೀಸಲಾತಿ ಜಾರಿಗೊಳಿಸಿದವರು.

ಎರಡನೆಯವರಾಗಿ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದಲ್ಲಿ ಮೀಸಲಾತಿ ಜಾರಿಗೊಳಿಸಿದರು.
1946ರ ಡಿಸೆಂಬರ್‍ನಲ್ಲಿ ಕಾನ್‍ಸ್ಟಿಯೆಂಟ್ ಎಸೆಂಬ್ಲಿಯು ಸಂವಿಧಾನ ರಚನಾ ಸಮಿತಿ ಸಹಿತ ನಾನಾ ಸಮಿತಿಗಳನ್ನು ರಚಿಸಿತು. ಅದು ಕೆಲಸ ಆರಂಭಿಸಲೇ ಇಲ್ಲ.
ಮಹಾತ್ಮಾ ಗಾಂಧೀಜಿಯವರ ಸಲಹೆಯಂತೆ 1947ರ ಆಗಸ್ಟ್‍ನಲ್ಲಿ ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ನೆಹರೂ ಸರಕಾರವು ಸಂವಿಧಾನ ಕರಡು ಸಮಿತಿಯನ್ನು ರಚಿಸಿತು. ಕರಡು ಸಮಿತಿಯ ಕೆಲಸ ಕರಡು ತಯಾರಿಸಿ ಹಿಂದೆ ರಚಿಸಲಾದ ಸ್ಟೀರಿಂಗ್ ಸಮಿತಿಗೆ ಕೊಡುವುದು ಮಾತ್ರ ಆಗಿತ್ತು. ಅಂಬೇಡ್ಕರ್ ಅವರಿಂದಲೇ ಸಂವಿಧಾನ ಬಯಸಿದ ಕಾಂಗ್ರೆಸ್ ಸರಕಾರ ವಿರೋಧ ಪಕ್ಷದಲ್ಲಿದ್ದ ಅವರನ್ನು ಕಾನೂನು ಮಂತ್ರಿ ಮಾಡಿ ಅವರಿಗೆ ಆ ಜವಾಬ್ದಾರಿ ಒಪ್ಪಿಸಿತು. ಅದೇ ಕಾಂಗ್ರೆಸ್ ಸರಕಾರವೇ ಆಗ ಅಂಬೇಡ್ಕರ್ ಕೊಟ್ಟ ಮೀಸಲಾತಿಗೆ ಒಪ್ಪಿಗೆ ಮುದ್ರೆ ಒತ್ತಿದ್ದು.

ಸಂವಿಧಾನದ ವಿಶೇಷತೆ ಇರುವುದೇ ಇಂತಾ ವಿಷಯಗಳಲ್ಲಿ. ಸಾಮಾಜಿಕ ನ್ಯಾಯವನ್ನು ನಾನಾ ರೀತಿಯಲ್ಲಿ ತರಲು ಅಲ್ಲಿ ಪ್ರಯತ್ನಿಸಲಾಗಿದೆ. ಇಂದಿರಾ ಗಾಂಧಿಯವರು ಸೆಕ್ಯೂಲರ್ ಮೊದಲಾದ ಶಬ್ದಗಳನ್ನು ಸಂವಿಧಾನಕ್ಕೆ ಸೇರಿಸಿ ಅದರ ಸಮಾನತೆ ಅಂಶ ಹೆಚ್ಚಿಸಿದ್ದಾರೆ. ಆದರೆ ಸಮಾಜ ಅಷ್ಟು ಬೇಗ ಬದಲಾಗುವುದಿಲ್ಲ. ಇತರ ಸಮಾಜ ಬಿಡಿ, ದಲಿತರಲ್ಲೇ ಮೀಸಲಾತಿಯ ಲಾಭ ಎಲ್ಲರಿಗೂ ಸರಿಯಾಗಿ ದಕ್ಕಿಲ್ಲ. ಹಾಗಾಗಿ ಒಳ ಮೀಸಲಾತಿ ಕೂಗು ಎದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯು ಸರಿಯಾಗಿ ಉಳಿದರೆ ಮುಂದೆ ಸಂವಿಧಾನ ಆಶಿಸಿದ ಭಾರತ ಪ್ರಕಾಶಿಸಿತು ಎನ್ನಬಹುದು.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.