ಶಕ್ತಿ ಯೋಜನೆಗೆ ಚಾಲನೆ : ಪ್ರಯಾಣಿಕರೊಂದಿಗೆ ಬಸ್ ನಲ್ಲಿ ಸಂಚರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ : ರಾಜ್ಯದ‌ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಆರಂಭಿಸಿರುವ ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿಯ ಕೆ ಎಸ್ ಆರ್ ಟಿ ಸಿ ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣದಲ್ಲಿ ಜೂನ್ 11ರ ರವಿವಾರದಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ರಾಜ್ಯಾದ್ಯಂತ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಲು ಜಾರಿಗೆ ತಂದಿರುವ ಶಕ್ತಿ ಯೋಜನೆಯು ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿಗೆ ನೆರವಾಗಲಿದೆ. ರಾಜ್ಯದಲ್ಲಿ 20,000 ಕ್ಕೂ ಅಧಿಕ ಸರ್ಕಾರಿ ಬಸ್ ಗಳಿದ್ದು ಅವುಗಳಲ್ಲಿ 18609 ಬಸ್ ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ದೊರೆಯಲಿದೆ. ರಾಜ್ಯದ ಒಟ್ಟು ಸರ್ಕಾರಿ ಬಸ್‌ಗಳಲ್ಲಿನ ಶೇ.95 ಬಸ್ ಗಳಲ್ಲಿ ಪ್ರತಿ ದಿನ 41.8 ಲಕ್ಷ ಮಹಿಳೆಯರು ತಮ್ಮ ಪ್ರತಿದಿನದ ದೈನಂದಿನ ದುಡಿಮೆ ಮತ್ತಿತರ ಕಾರ್ಯಗಳಿಗೆ ಬಸ್‌ಗಳಲ್ಲಿ ಸಂಚರಿಸಲಿದ್ದು, ಈ ಉಚಿತ ಪ್ರಯಾಣವು ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನಕ್ಕೆ ನೆರವಾಗಲಿದೆ. ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ 4051 ಕೋಟಿ ರೂ ವೆಚ್ಚವಾಗಲಿದ್ದು, ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.

ಇನ್ನು ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರವು ಚುನಾವಣಾ ಅವಧಿಯಲ್ಲಿ ನೀಡಿದ ಉಳಿದ 4 ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಗೃಹಲಕ್ಷ್ಮಿ ಯೋಜನೆಗೆ ರಾಜ್ಯಾದ್ಯಂತ ಆಗಸ್ಟ್ 15 ರಂದು ಚಾಲನೆ ನೀಡಲಾಗುವುದು. ರಾಜ್ಯದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದಾಗಿದ್ದು, ಈ ಕುರಿತ ಅರ್ಜಿ ನಮೂನೆಯನ್ನು ಇನ್ನು 2 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಆನ್‌ಲೈನ್ ಮೂಲಕ ಅಥವಾ ಸಿಡಿಪಿಓ ಗಳ ಮೂಲಕ ,ಅಂಗನವಾಡಿ ಶಿಕ್ಷಕರ ಮೂಲಕ ಹಾಗೂ ಗ್ರಾಮ ಒನ್ ಮೂಲಕ ಸಹ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ, ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಇತರೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮತ್ತು ಎಲ್ಲಾ ಪಕ್ಷಗಳ ಸಹಕಾರದಿಂದ ಬಸವಣ್ಣ ಅವರ ಕಾಯಕವೇ ಕೈಲಾಸ ಹಾಗೂ ದಯಯೇ ಧರ್ಮದ ಮೂಲ ಸಂದೇಶದಂತೆ ನಾನು ಕಾರ್ಯನಿರ್ವಹಿಸಲಿದ್ದೇನೆ. ಜಿಲ್ಲಾಡಳಿತವು ಜಿಲ್ಲೆಯ ಜನರ ಸಮಸ್ಯೆಗಳಿಗೆ 24 ಗಂಟೆಗಳ ಕಾಲ ಸದಾ ಸ್ಪಂದಿಸುವಂತೆ ಮತ್ತು ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸುವಂತೆ ಹಾಗೂ ಜಿಲ್ಲೆಯ ಪ್ರಗತಿಗೆ ಎಲ್ಲಾ ರೀತಿಯ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ಸನ್ಮಾನಿಸಲಾಯಿತು. ನಂತರ ಶಕ್ತಿ ಯೋಜನೆಗೆ ಹಸಿರು ನಿಶಾನೆ ತೋರಿಸಿದ ಸಚಿವರು, ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಟಿಕೆಟ್ ಹಾಗೂ ಗುಲಾಬಿ ವಿತರಿಸಿ, ಪ್ರಯಾಣಿಕರೊಂದಿಗೆ ತಾವೂ ಸಹ ಬಸ್‌ನಲ್ಲಿ ಸಂಚರಿಸಿದರು. ಅದೇ ಬಸ್‌ನಲ್ಲಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹಣ ನೀಡಿ, ಟಿಕೆಟ್ ಪಡೆದು ಪ್ರಯಾಣಿಸಿದರು.

ಉಡುಪಿ ವಿಧಾನಸಭಾ ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸ್ವಾಗತಿಸಿದರು. ಕ.ರಾ.ರ.ಸಾ. ನಿಗಮ ಮಂಗಳೂರು ವಿಭಾಗದ ಯಾಂತ್ರಿಕ ಆಭಿಯಂತರ ಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಹಾವಂಜೆ ನಿರೂಪಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೈ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.