ವಿಶ್ವದಾಖಲೆ ಸಾಧಕಿ ಕುಮಾರಿ ಶ್ರದ್ದಾ ಶೆಟ್ಟಿ ಶ್ರೀ ಕ್ಷೇತ್ರ ಸೌತಡ್ಕಕ್ಕೆ ಭೇಟಿ
ಕೊಕ್ಕಡ:ಲಾಯಿಲ ಗ್ರಾಮದ ಎಣಿಂಜೆ ನಿವಾಸಿ ಶಾರದ ಹಾಗೂ ಶೇಖರ ಶೆಟ್ಟಿ ದಂಪತಿಗಳ ಪುತ್ರಿ, ವಿಶ್ವದಾಖಲೆ ಸಾಧಕಿ ಕುಮಾರಿ ಶ್ರದ್ದಾ ಶೆಟ್ಟಿಯವರು ಜ.06ರಂದು ಶ್ರೀ ಕ್ಷೇತ್ರ ಸೌತಡ್ಕಕ್ಕೆ ಭೇಟಿ ನೀಡಿ, ತನಗೆ ಲಭಿಸಿದ ಪ್ರಶಸ್ತಿಯೊಂದಿಗೆ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಪ್ರಸ್ತುತ ಉಜಿರೆಯ ಎಸ್.ಡಿ.ಎಂ.ಕಾಲೇಜಿನಲ್ಲಿ ಬಿ.ಇಡಿ ವಿದ್ಯಾಭ್ಯಾಸ ಮಾಡುತ್ತಿರುವ ಶ್ರದ್ದಾ ಶೆಟ್ಟಿಯವರು, ಹವ್ಯಾಸವಾಗಿ ಹೂವಿನ ರಂಗೋಲಿಗಳನ್ನು ಬಿಡಿಸುವ ಕಲೆಯಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ ಬೃಹದಾಕಾರದ ಹೂವಿನ ರಂಗೋಲಿಯನ್ನು ರೂಪಿಸಿ ವಿಶ್ವದಾಖಲೆ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಶಿಷ್ಟ ಹೂವಿನ ರಂಗೋಲಿ ನಿರ್ಮಾಣಕ್ಕೆ ಅಗತ್ಯವಾದ ಹೂವುಗಳನ್ನು ಸೌತಡ್ಕ ಕ್ಷೇತ್ರದಿಂದಲೇ ಸಂಗ್ರಹಿಸಿದ್ದೇ ತನ್ನ ಸಾಧನೆಗೆ ಹಾಗೂ ಪ್ರಶಸ್ತಿ ಲಭಿಸಲು ಕಾರಣವಾಯಿತು ಎಂದು ಶ್ರದ್ದಾ ಶೆಟ್ಟಿಯವರು ತಮ್ಮ ಮನದಾಳದ ಮಾತಾಗಿ ಹಂಚಿಕೊಂಡರು.

ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿಯ ಸಕ್ರಿಯ ಸದಸ್ಯೆಯಾಗಿರುವ ಶ್ರದ್ದಾ ಶೆಟ್ಟಿಯವರು, ಕನ್ನಾಜೆಯ ಶ್ರೀ ದುರ್ಗಾ ಭಜನಾ ಮಂಡಳಿಯ ಭಜಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 1 ಗಂಟೆ 39 ನಿಮಿಷಗಳೊಳಗೆ 8 ಅಡಿ ಗಾತ್ರದ ಹೂವಿನ ರಂಗೋಲಿಯನ್ನು ತಯಾರಿಸಿ ದಾಖಲೆ ನಿರ್ಮಿಸಿರುವುದು ಇವರ ಪ್ರಮುಖ ಸಾಧನೆಯಾಗಿದ್ದು, ಈ ಶ್ರಮದ ಫಲವಾಗಿ ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಮುಂದುವರೆದು ನವೆಂಬರ್ ತಿಂಗಳಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವಕ್ಕೂ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಕೊಕ್ಕಡ ಶ್ರೀ ಲಕ್ಷ್ಮೀ ಡಿಜಿಟಲ್ಸ್ ಮಾಲಕ ಶಶಿ, ಭಕ್ತಿ ಹೆಜ್ಜೆ ಬಳಗದ ಸದಸ್ಯರಾದ ದಿನೇಶ್ ಗೌಡ ಕೊಯ್ಯೂರು, ಸಾಧಕಿಯ ಪೋಷಕರಾದ ಶೇಖರ ಶೆಟ್ಟಿ ಹಾಗೂ ಕುಟುಂಬದ ಸದಸ್ಯರು, ಸಹಪಾಠಿ ಮಿತ್ರರು ಉಪಸ್ಥಿತರಿದ್ದು, ಶ್ರದ್ದಾ ಶೆಟ್ಟಿಯವರ ಮುಂದಿನ ಸಾಧನೆಗಳಿಗೆ ಶುಭ ಹಾರೈಸಿದರು.


















