ಸೋಮೇಶ್ವರದಿಂದ ನಾಪತ್ತೆಯಾಗಿದ್ದ ಕಾರು ಡೀಲರ್ ಮೃತದೇಹ ಉಚ್ಚಿಲ ಸಮುದ್ರತೀರದಲ್ಲಿ ಪತ್ತೆ

ಉಳ್ಳಾಲ: ಸೋಮೇಶ್ವರ ಸಮುದ್ರತೀರದಿಂದ ನಾಪತ್ತೆಯಾಗಿದ್ದ ಸೆಕೆಂಡ್ಸ್ ಕಾರು ಮಾರಾಟ ಮಳಿಗೆ ಮಾಲೀಕ ಉಳ್ಳಾಲ ಧರ್ಮನಗರ ನಿವಾಸಿ ವಸಂತ್ ಅಮೀನ್ (49) ಮೃತದೇಹ ಸೋಮೇಶ್ವರ ಉಚ್ಚಿಲದ ಸಮುದ್ರ ತೀರದಲ್ಲಿ ಇಂದು ಪತ್ತೆಯಾಗಿದೆ. ಎ.26 ರ ಮಧ್ಯಾಹ್ನ ವೇಳೆ ವಸಂತ್ ಅವರ ಕಾರು , ಮೊಬೈಲ್ ಹಾಗೂ ಷೂ ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಈ ವೇಳೆ ಸ್ಥಳೀಯರು ವಸಂತ್ ಅವರು ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿರುವುದನ್ನು ಕಂಡಿದ್ದರು. ಇದರಿಂದ ಆತ್ಮಹತ್ಯೆ ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿತ್ತು. ಇದೀಗ ಮೃತದೇಹ ನ್ಯೂಉಚ್ಚಿಲ ಸಮೀಪ ಪತ್ತೆಯಾಗಿದೆವಸಂತ್ ಅವರು ಬಿಕರ್ನಕಟ್ಟೆಯ ಜಯಶ್ರೀ ಗೇಟ್ ಬಳಿ ಸೆಕೆಂಡ್ಸ್ ಕಾರು ಮಾರಾಟದ ಮಳಿಗೆಯನ್ನು ಹೊಂದಿದ್ದರು. ಕಚೇರಿ ಸಿಬ್ಬಂದಿಗೆ ಕರೆ ಮಾಡಿ ಜ್ವರವಿರುವುದರಿಂದ ಕಚೇರಿಗೆ ಬರುತ್ತಿಲ್ಲ ಎಂದು ಹೇಳಿದ್ದರು. ಆದರೆ ಮಧ್ಯಾಹ್ನ ವೇಳೆ ಕೃತ್ಯವೆಸಗಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಈವರೆಗೆ ತಿಳಿದುಬಂದಿಲ್ಲ. ಧರ್ಮನಗರದಲ್ಲಿ ಕೆಲ ತಿಂಗಳ ಹಿಂದಷ್ಟೇ ನೂತನ ಮನೆಯನ್ನು ಕಟ್ಟಿದ್ದ ವಸಂತ್ , ಪತ್ನಿ, ಮಗಳು ಹಾಗೂ ಹೆತ್ತವರನ್ನು ಅಗಲಿದ್ದಾರೆ.
