ಡಿ.15 : ರಾಜ್ಯ ವಾರ್ತಾ ಆಯುಕ್ತರ ಕಚೇರಿ ಎದುರು ಪ್ರತಿಭಟನೆ

ಬೆಂಗಳೂರು : ಹಿಂದುಳಿದ ವರ್ಗಗಳ ಪತ್ರಕರ್ತರ ಮಾಲೀಕತ್ವದ ಪತ್ರಿಕೆಗಳಿಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿರುವ ಮಾಸಿಕ ಎರಡು ಪುಟ ಜಾಹೀರಾತು ಹಾಗೂ ಮೀಡಿಯಾ ಕಿಟ್ ನೀಡುವಲ್ಲಿ ವಿಳಂಬವಾಗಿದ್ದು, ಸರಕಾರದ ಈ ವಿಳಂಬ ನೀತಿಯನ್ನು ವಿರೋಧಿಸಿ ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ರಾಜ್ಯ ವಾರ್ತಾ ಇಲಾಖೆಯ ಆಯುಕ್ತರ ಕಛೇರಿಯ ಮುಂಭಾಗದಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ, ವರದಿಗಾರರ ಸಂಘ ಎಚ್ಚರಿಕೆ ನೀಡಿದೆ.

ಹಿಂದುಳಿವ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಹಾಗೂ ವರದಿಗಾರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯು ಬೆಂಗಳೂರಿನ ಪ್ರದೇಶ ಕುರುಬರ ಸಂಘದ ಕನಕ ಸಭಾಂಗಣದಲ್ಲಿ ಸಂಘದ ರಾಜ್ಯ ಅಧ್ಯಕ್ಷ ಕೆ. ಆರ್. ನೀಲಕಂಠ ಅವರ ಅಧ್ಯಕ್ಷತೆಯಲ್ಲಿ ನಡೆದು ಈ ಬಗ್ಗೆ ನಿರ್ಣಯ ಕೈಗೊಂಡಿತು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘವು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ಮೀಡಿಯಾ ಕಿಟ್ ನೀಡುವುದು ಹಾಗೂ ಹಿಂದುಳಿದ ವರ್ಗಗಳ ಪತ್ರಿಕೆಗಳ ಮಾಲೀಕರು ಹೊರತರುತ್ತಿರುವ ಪತ್ರಿಕೆಗಳಿಗೆ ಪ್ರತೀ ತಿಂಗಳು ಎರಡು ಪುಟ ಜಾಹೀರಾತು ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದ್ದು, ಸರಕಾರ ಈ ತನಕ ಸ್ಪಂದಿಸಿಲ್ಲ ಎಂದು ಸಂಘ ಹೇಳಿದೆ. ಬಜೆಟ್ ನಲ್ಲಿ ಘೋಷಣೆ ಮಾಡಲಾದ ಈ ಕೊಡುಗೆಯನ್ನು ಇನ್ನೂ ಜಾರಿ ಮಾಡದಿರುವ ಬಗ್ಗೆ ಸಂಘ ಕಳವಳ ವ್ಯಕ್ತಪಡಿಸಿದೆ.

ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ಧರಾಜು, ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ಡಾ.ಎಂ.ಎಸ್.ಮಣಿ, ತಾರಾನಾಥ್ ಗಟ್ಟಿ ಕಾಪಿಕಾಡ್ , ಡಾ.ಮಿಂಚು ಶ್ರೀನಿವಾಸ್, ಸತೀಶ್, ಮುನಿರಾಜು ಹಾಗೂ ರಾಜ್ಯ ಸಂಪಾದಕರ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು ಮಾತನಾಡಿ, ಹಿಂದುಳಿದ ವರ್ಗಗಳ ಪತ್ರಕರ್ತರ ಬಗ್ಗೆ ರಾಜ್ಯ ಸರ್ಕಾರದ ತಾತ್ಸಾರ ಧೋರಣೆ ಹಾಗೂ ಬೇಜವಾಬ್ಧಾರಿತನವನ್ನು ಒಕ್ಕೊರಲಿನಿಂದ ಖಂಡಿಸಿದರು.


ಒಂದು ವಾರದೊಳಗೆ ಹಿಂದುಳಿದ ವರ್ಗಗಳ ಪತ್ರಕರ್ತರ ನ್ಯಾಯಬದ್ಧವಾದ ಬೇಡಿಕೆಯನ್ನು ಈಡೇರಿಸದಿದ್ದರೆ ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ವಾರ್ತಾ ಇಲಾಖೆಯ ಆಯುಕ್ತರ ಕಛೇರಿಯ ಮುಂಭಾಗದಲ್ಲಿ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸಿ ಹಿಂದುಳಿದ ವರ್ಗಗಳ ಪತ್ರಕರ್ತರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಆರ್.ನೀಲಕಂಠ ಅವರು ಘೋಷಿಸಿದರು.
ಜನವರಿ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆಯಲಿರುವ ಸಂಘದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಹಿಂದುಳಿದ ವರ್ಗಗಳ ಪತ್ರಕರ್ತರ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಲಾಯಿತು..


ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ವರದಿಗಾರರ ಸಂಘದ ಕಾರ್ಯದರ್ಶಿಗಳಾದ ಅಭಿಮನ್ಯು ರಮೇಶ್, ಶಿವರಾಜ್ ಮೌರ್ಯ , ಐ.ಎಚ್. ಸಂಗಮದೇವ್, ಎಚ್.ಬಿ.ಮಂಜುನಾಥ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.