ಶಿರಾಡಿ: ಮದ್ಯಪಾನ ವ್ಯಸನ ವ್ಯಕ್ತಿ ಪ್ಲಾಸ್ಟಿಕ್ ಬೆಲ್ಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ
ನೆಲ್ಯಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಬರೆಮೇಲು ಎಂಬಲ್ಲಿ ಅಮಲು ಪದಾರ್ಥಗಳ ವ್ಯಸನಕ್ಕೆ ಮತ್ತೊಂದು ಜೀವ ಬಲಿಯಾದ ದುರ್ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ವಿಪರೀತ ಮದ್ಯಪಾನ ಹಾಗೂ ಅಮಲು ಪದಾರ್ಥ ಸೇವನೆಯ ಚಟಕ್ಕೆ ಒಳಗಾಗಿದ್ದ ಮಂಜು ನಾಯ್ಕ (49) ಎಂಬವರು ಪ್ಲಾಸ್ಟಿಕ್ ಬೆಲ್ಟ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಂಜು ನಾಯ್ಕ ಅವರು ಮನೆಯ ಮೇಲ್ಭಾಗದ ಸಿಮೆಂಟ್ ಕಿಟಕಿಯ ತೂತಿಗೆ ಪ್ಲಾಸ್ಟಿಕ್ ಬೆಲ್ಟ್‌ನ ಒಂದು ತುದಿಯನ್ನು ಕಟ್ಟಿ, ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅವರು ದೀರ್ಘಕಾಲದಿಂದ ಮದ್ಯಪಾನ ಹಾಗೂ ಅಮಲು ಪದಾರ್ಥಗಳ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಈ ಕಾರಣದಿಂದ ಕುಟುಂಬಕ್ಕೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಅವರ ಪತ್ನಿ ಸುಶೀಲ ಅವರು ಮಾವ ತನಿಯಪ್ಪ ಅವರ ಮನೆಯಲ್ಲಿ ವಾಸವಾಗಿದ್ದರು.
ಈ ಸಂಬಂಧ ಮೃತನ ಪತ್ನಿ ಸುಶೀಲ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.


















