ಮಂಗಳೂರು: ತಿರುವೈಲ್‍ನ ಸರ್ಕಾರಿ ಶಾಲೆಗೆ ಆಧುನಿಕತೆಯ ಮೆರಗು
ಸರಕಾರಿ ಶಾಲೆಗಳೆಂದರೆ ಅಸಡ್ಡೆಯೇ ಜಾಸ್ತಿ. ಯಾಕೆಂದರೆ ಆ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಸಹಿತ ಹೆಚ್ಚಿನ ವ್ಯವಸ್ಥೆಗಳು ಸರಿಯಾಗಿರುವುದಿಲ್ಲ. ಆದರೆ ಈ ಮಾತನ್ನು ಸುಳ್ಳಾಗಿಸುತ್ತಿದೆ ಮಂಗಳೂರು ಹೊರ ವಲಯದ ಈ ಶಾಲೆ. ಅಷ್ಟಕ್ಕೂ ಆ ಶಾಲೆ ಯಾವುದು? ಅಲ್ಲಿನ ವಿಶೇಷತೆಗಳೇನು? ಈ ಸ್ಟೋರಿ ನೋಡಿ…
ಸುಸಜ್ಜಿತ ಕಟ್ಟಡ. ಗುಣಮಟ್ಟದ ಪೀಠೋಪಕರಣಗಳು. ಆಕರ್ಷಣೀಯ ಕ್ಲಾಸ್ ರೂಂ….. ಶಿಸ್ತಿನ ಸಿಪಾಯಿಗಳಂತಿರುವ ವಿದ್ಯಾರ್ಥಿಗಳು…. ಇವೆನ್ನೆಲ್ಲಾ ನೋಡುತ್ತಾ ಇದ್ಯಾವುದೋ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಇರಬಹುದು ಅಂತ ನೀವು ತಿಳಿದು ಕೊಂಡಿದ್ದೀರಾ?. ಇಲ್ಲ ಇದು ಮಂಗಳೂರು ಹೊರವಲಯದ ವಾಮಂಜೂರಿನ ತಿರುವೈಲ್‍ನಲ್ಲಿರುವ ಜಿಲ್ಲಾ ಪಂಚಾಯತ್ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ. ಒಂದು ಸರಕಾರಿ ಶಾಲೆ ಇಷ್ಟು ಸುಸಜ್ಜಿತವಾಗಿರುತ್ತಾ. ಹೌದು ಇರುತ್ತೆ. ಅದಕ್ಕೆ ಕಾರಣವೂ ಇದೆ
ಈ ಶಾಲೆ ಇಂದು ಈ ಸ್ಥಿತಿಗೆ ತಲುಪಲು ಶಾಲೆಯ ಹಳೆ ವಿದ್ಯಾರ್ಥಿಗಳೇ ಕಾರಣ. ಹಳೆ ವಿದ್ಯಾರ್ಥಿಗಳ ಒಗ್ಗೂಡುವಿಕೆಯಿಂದ ಮುಚ್ಚುವ ಹಂತದಲ್ಲಿದ್ದ ಶಾಲೆ ಪುಟಿದೆದ್ದಿದೆ. ಇದೇ ಶಾಲೆಯ ಹಳೆ ವಿದ್ಯಾರ್ಥಿನಿಯೂ ಸದ್ಯ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯೂ ಆಗಿರುವ ಹೇಮಲತಾ ರಘು ಸಾಲ್ಯಾನ್ ಮತ್ತು ಅವರ ಗಂಡ ರಘು ಸಾಲ್ಯಾನ್ ಮುತುವರ್ಜಿಯಿಂದ ಈ ಶಾಲೆಗೆ ಆಧುನಿಕತೆಯ ಮೆರುಗು ಸಿಕ್ಕಿದೆ.
ಶಾಲೆಗೆ ಬಸ್ಸು, ಸುಸಜ್ಜಿತ ಕಟ್ಟಡ, ಪೀಠೋಪಕರಣ ಎಲ್ಲವನ್ನೂ ದಾನಿಗಳ ನೆರವಿನ ಮೂಲಕ ಒದಗಿಸಿದ್ದಾರೆ. ವಿಶೇಷ ಅಂದರೆ ಉದ್ಘಾಟನೆಗೊಂಡ ಹೊಸ 3 ಹೊಸ ಕೊಠಡಿಗಳ ಪೈಕಿ ಒಂದು ಕೊಠಡಿಯನ್ನು ರಘು ಸಾಲ್ಯಾನ್, ಹೇಮಲತಾ ರಘುಸಾಲ್ಯಾನ್ ಕುಟುಂಬವೇ ನಿರ್ಮಿಸಿದೆ.
ಒಟ್ಟಿನಲ್ಲಿ ಮುಚ್ಚುವ ಹಂತದಲ್ಲಿದ್ದ ಶಾಲೆಯೊಂದು, ಶಾಲೆಯೇ ದೇವಾಲಯ ಎಂದು ನಂಬಿರುವ ದಂಪತಿಗಳಿಂದ ಮತ್ತೆ ಗರಿಗೆದರಿದೆ.