ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವ
ಮಂಜೇಶ್ವರ : ಕಳೆದ ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವದ ದಿನಾಂಕ ನಿಗದಿ ಸಮಾರಂಭವು ನಡೆಯಿತು.
“ಕುದಿಕಳ” ಎಂಬ ಹೆಸರಿನಲ್ಲಿ ಸಂಪ್ರದಾಯ ಪ್ರಕಾರ ನಡೆಯುವ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬನಿಂದ ದೈವಪಾತ್ರಿಗಳೇ ವೀಳ್ಯದೆಲೆ ಹಾಗೂ ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ.
ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಉತ್ಸವವು ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಧಾರ್ಮಿಕ ಸೌಹಾರ್ದತೆಯ ಸಂದೇಶಗಳನ್ನು ಸಾರುವ ಹಬ್ಬಗಳಲ್ಲೊಂದಾಗಿದೆ.
ಉತ್ಸವಕ್ಕೆ ಸಮೃದ್ಧಿ ಮತ್ತು ಐಶ್ವರ್ಯವನ್ನು ತಂದೊಡ್ಡುವ ಅಣ್ಣ ತಮ್ಮ ದೈವಗಳು ಇಲ್ಲಿ ನೆಲೆಸಿದ್ದಾರೆ. ಹಬ್ಬದ ವಿಶೇಷ ಆಚರಣೆಗಳಲ್ಲೊಂದಾದ ಉತ್ಸವದ ದಿನ ನಿಶ್ವಯದ “ಕುದಿ ಕುಳ” ಎಂಬ ಹೆಸರಿನಲ್ಲಿ ಕರೆಯಲಾಗುವ ಈ ಸಮಾರಂಭವು ಶ್ರದ್ಧಾಭಕ್ತಿಯ ವಾತಾವರಣದಲ್ಲಿ ನಡೆಯಿತು.
ಸಂಪ್ರದಾಯದಂತೆ ತೆಂಗಿನಕಾಯಿ ವೀಳ್ಯದೆಲೆ ಮಾರಾಟವೂ ನಡೆಯಿತು. ದೈವಪಾತ್ರಿಗಳು, ಗುರಿಕ್ಕಾರರು ವೀಳ್ಯದೆಲೆ ಮಾರಟ ಮಾಡಲು ನಿಯೋಜಿಸಲ್ಪಟ್ಟ ಮುಸ್ಲಿಂ ಸಮುದಾಯದ ವ್ಯಕ್ತಿ ಟಿ.ಎಸ್.ಸೈಯದ್ ರವರಿಂದ ವೀಳ್ಯದೆಲೆ ಹಾಗೂ ಅಡಿಕೆಯನ್ನು ಖರೀದಿಸಿದರು.
ವಿಷು ನಂತರದ ಮೊದಲ ಶುಕ್ರವಾರದಂದು ಮಸೀದಿಗೆ ತೆರಳಿ ಜಮಾಹತ್ ಸದಸ್ಯರುಗಳನ್ನು ಉತ್ಸವಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಮೇ 9 ರಂದು ಧ್ವಜಾರೋಹಣ, 11 ಮತ್ತು 12 ರಂದು ಉತ್ಸವ ನಡೆಯಲಿದೆ.