ಬಟ್ಟೆ ತೊಳೆಯಲು ತೆರಳಿದ ದಂಪತಿ ಹೇಮಾವತಿ ನಾಲೆಯಲ್ಲಿ ಬಿದ್ದು ಸಾವಿಗೀಡಾದ ದುರ್ಘಟನೆ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನ. 23ರಂದು ಸಂಭವಿಸಿದ ದಾರುಣ ಘಟನೆ ಗ್ರಾಮಸ್ಥರನ್ನು ಕಣ್ಣೀರಲ್ಲಿಟ್ಟುಬಿಟ್ಟಿದೆ. ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ದಂಪತಿ ದುರಂತವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಟ್ಟೆ ತೊಳೆಯುವ ಸಂದರ್ಭ ದೀಪು ಕಾಲು ಜಾರಿಬಿದ್ದು ನಾಲೆಗೆ ಬಿದ್ದಾಳೆ. ತಕ್ಷಣವೇ ಪತ್ನಿಯನ್ನು ರಕ್ಷಿಸಲು ಗೋಪಾಲ್ ನಾಲೆಗೆ ಇಳಿದರೂ, ನಾಲೆಯಲ್ಲಿ ಹರಿಯುತ್ತಿದ್ದ ಭಾರೀ ಪ್ರಮಾಣದ ನೀರಿನ ಹರಿವು ಇಬ್ಬರನ್ನೂ ಒಯ್ದುಹಾಕಿದೆ. ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ದಂಪತಿ ಮನೆಗೆ ಮರಳದಿದ್ದ ಕಾರಣ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿ, ನಾಲೆ ದಡದಲ್ಲಿ ಬಟ್ಟೆಗಳು ಇರುವುದನ್ನು ಕಂಡು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಗೋಪಾಲ್ ಅವರ ಮೃತದೇಹವನ್ನು ನಾಲೆಯಲ್ಲಿ ಪತ್ತೆಹಚ್ಚಲಾಗಿದೆ. ದೀಪು ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮದ ಯುವ ದಂಪತಿಯ ಈ ದಾರುಣ ಮರಣ ಸ್ಥಳೀಯರಲ್ಲಿ ತೀವ್ರ ದುಃಖ ಮತ್ತು ಆಘಾತ ಮೂಡಿಸಿದೆ.


















