ದಕ್ಷಿಣ ಕನ್ನಡದ ‘ಮರಳು ಸಮಸ್ಯೆಗೆ ಅಧಿಕಾರಿಗಳೇ ಕಾರಣ …!!

ದಕ್ಷಿಣ ಕನ್ನಡದಲ್ಲಿ ಸೃಷ್ಟಿಯಾದ ಮರಳಿನ ಅಭಾವಕ್ಕೆ ಅಧಿಕಾರಿಗಳೆ ಕಾರಣ ಎಂದು ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶನ್ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ. ಈ ಸಮಸ್ಯೆಗೆ 10 ದಿನದೊಳಗೆ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್‍ನ ಅಧ್ಯಕ್ಷ ಮಹಾಬಲ ಕೊಟ್ಟಾರಿ ದ.ಕ.ಜಿಲ್ಲೆಯಲ್ಲಿ ಮರಳಿನ ಕೊರತೆಯಿಲ್ಲ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಳಿನ ಸಮಸ್ಯೆ ಸೃಷ್ಟಿಯಾಗಿದೆ. ಕೆಲವು ವರ್ಷಗಳ ಹಿಂದೆ ಕೇವಲ 800 ರೂ.ಗೆ ಮರಳು ಸಿಗುತ್ತಿತ್ತು. ಇಂದು ಅದರ ಬೆಲೆ 21 ಸಾವಿರಕ್ಕೇರಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರು ಮನೆ, ಕಟ್ಟಡಗಳನ್ನು ನಿರ್ಮಿಸಲಾಗದ ಸ್ಥಿತಿಯಲ್ಲಿದ್ದಾರೆ. ಮರಳಿನ ಅಭಾವದಿಂದಾಗಿ ಯಾವುದೇ ನಿರ್ಮಾಣ ಕಾಮಗಾರಿ ನಡೆಯುತ್ತಿಲ್ಲ.

ಇದರಿಂದ ಕೂಲಿ ಕಾರ್ಮಿಕರು, ಗಾರೆ ಕೆಲಸಗಾರರು, ಮರದ ಕೆಲಸ ಗಾರರು, ಕಬ್ಬಿಣದ ಕೆಲಸಗಾರರು, ಪೈಂಟರ್‍ಗಳು, ಇಂಜಿನಿಯರ್‍ಗಳು, ಸೈಟ್ ಸೂಪರ್‍ವೈಸರ್‍ಗಳು ಮತ್ತವರ ಕುಟುಂಬದ ಸದಸ್ಯರು ಉಪವಾಸ ಬೀಳುವ ಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಟ್ಟಡ ನಿರ್ಮಾಣ ಉದ್ಯಮವು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಸರಕಾರ ಆದಷ್ಟು ಬೇಗ ಮರಳು ಸಮಸ್ಯೆಯನ್ನು ಬಗೆಹರಿಸಬೇಕು. ಕಟ್ಟಡ ಮತ್ತಿತರ ನಿರ್ಮಾಣ ಉದ್ಯಮವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಅಸೋಸಿಯೇಶನ್‍ನ ಪದಾಧಿಕಾರಿಗಳಾದ ದಿನಕರ್ ಸುವರ್ಣ, ದೇವಾನಂದ, ಕೆನರಾ ಬಿಲ್ಡರ್ ಅಸೋಸಿಯೇಶನ್‍ನ ಬಾಲಸುಬ್ರಹ್ಮಣ್ಯ, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್‍ನ ವಿಜಯ ವಿಷ್ಣು ಮಯ್ಯ ಮತ್ತು ಏಕನಾಥ ದಂಡಕೇರಿ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಸಿಮೆಂಟ್ ಅಸೋಸಿಯೇಶನ್‍ನ ಪುರುಷೋತ್ತಮ ಶೆಣೈ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.