ಉಡುಪಿ ಧರ್ಮಪ್ರಾಂತ್ಯದ ‘ಸುವಿಚಾರ ಚಿಂತನ-ಮಂಥನ ತಂಡ’ದ ಅಧ್ಯಕ್ಷರಾಗಿ ಡಾ|ಜೆರಾಲ್ಡ್ ಪಿಂಟೊ, ಪ್ರ. ಕಾರ್ಯದರ್ಶಿಯಾಗಿ ಮೈಕಲ್ ರೊಡ್ರಿಗಸ್ ಆಯ್ಕೆ
ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖಂಡರನ್ನು ಒಳಗೊಂಡ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಸುವಿಚಾರ ಚಿಂತನ-ಮಂಥನ ತಂಡದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲರಾದ ಡಾ|ಜೆರಾಲ್ಡ್ ಪಿಂಟೊ ಆಯ್ಕೆಯಾಗಿದ್ದು ಪ್ರಧಾನ ಕಾರ್ಯದರ್ಶಿಯಾಗಿ ಧರ್ಮಪ್ರಾಂತ್ಯದ ಮಾಧ್ಯಮ ಸಂಯೋಜಕ, ಪತ್ರಕರ್ತರಾದ ಮೈಕಲ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಮಾಜಿ ಅಧ್ಯಕ್ಷರಾದ ಮೇರಿ ಡಿ’ಸೋಜಾ ಉದ್ಯಾವರ ಆಯ್ಕೆಯಾಗಿದ್ದಾರೆ.
ಭಾನುವಾರ ಕಕ್ಕುಂಜೆಯ ಅನುಗ್ರಹ ಪಾಲನ ಕೇಂದ್ರದಲ್ಲಿ ನಡೆದ ಸುವಿಚಾರ ಚಿಂತನ-ಮಂಥನ ತಂಡದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ವಿವಿಧ ಕ್ಷೇತ್ರಗಳಾದ ಮಾಧ್ಯಮ, ವೈದ್ಯಕೀಯ, ಕಾನೂನು, ಸಾಮಾಜಿಕ ಕಾರ್ಯಕರ್ತರು ನರ್ಸಿಂಗ್, ಕೃಷಿ, ಉದ್ಯಮಿಗಳು, ರಾಜಕೀಯ ಮುಖಂಡರು, ಕಲೆ ಮತ್ತು ನಾಟಕ ಕ್ಷೇತ್ರದ ಪ್ರತಿನಿಧಿಗಳನ್ನೊಳಗೊಂಡಿರುವ ತಂಡವು ಕರ್ನಾಟಕ ಪ್ರಾಂತೀಯ ಮಟ್ಟದ ಧರ್ಮಾಧ್ಯಕ್ಷರುಗಳ ಸಭೆಯ ಅಧೀನದಲ್ಲಿ ಕರ್ನಾಟಕದ ಎಲ್ಲಾ ಧರ್ಮಪ್ರಾಂತ್ಯಗಳಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಆಯ್ಕೆ ಪ್ರಕ್ರಿಯೆಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಕರ್ನಾಟಕ ಪ್ರಾಂತ್ಯದ ಚಿಂತನ-ಮಂಥನ ತಂಡದ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಉಪಸ್ಥಿತರಿದ್ದರು.


















