ಉಡುಪಿಯ ಕೋಡಿ ಬೆಂಗ್ರೆ ಶಾಲೆಯಲ್ಲಿ ಶಿಕ್ಷಕರ ಕೊರತೆ: ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡುವಂತೆ ವಿದ್ಯಾರ್ಥಿಗಳ ಪ್ರತಿಭಟನೆ

ಉಡುಪಿ ಜಿಲ್ಲೆಯ ಕೋಡಿ ಬೆಂಗ್ರೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚು ಮಾಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

98 ವರ್ಷ ಇತಿಹಾಸ ಇರುವ ಉಡುಪಿಯ ಕೋಡಿ ಬೆಂಗ್ರೆ ಶಾಲೆಯಲ್ಲಿ ಈಗ ಕೇವಲ ಮೂವರು ಖಾಯಂ ಶಿಕ್ಷಕರಿದ್ದು 1ರಿಂದ 7ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಇಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯ ನೆಪ ಒಡ್ಡಿ ಮೂವರು ಶಿಕ್ಷಕರಲ್ಲಿ ಒಬ್ಬರನ್ನು ವರ್ಗಾವಣೆ ಮಾಡುವುದನ್ನು ತಾತ್ಕಾಲಿಕವಾಗಿ ಕೆಲವೊಂದು ಕಾರಣದಿಂದ ತಡೆಹಿಡಿಯಲಾಗಿತ್ತು. ಆದರೆ ಕಳೆದ ವರ್ಷದಂತೆ ಪುನಃ ಹೆಚ್ಚುವರಿ ಶಿಕ್ಷಕರು ಎಂಬ ನೆಪ ಒಡ್ಡಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸುವ ಸೂಚನೆ ನೀಡಿದ್ದಾರೆ.

ಆದ್ದರಿಂದ ತರಗತಿಯಿಂದ ಹೊರಬಂದು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಪೋಷಕರು ಮತ್ತು ಗ್ರಾಮಸ್ಥರು ಬೆಂಬಲ ನೀಡಿದ್ದು, ಹೆಚ್ಚುವರಿ ಶಿಕ್ಷಕರನ್ನು ಕೊಡದಿದ್ದರೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಶಾಲೆಗೆ ಬಂದ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು – ಪೋಷಕರ ನಡುವೆ ತಳ್ಳಾಟ ಉಂಟಾಗಿದ್ದು, ತಳ್ಳಾಟದಲ್ಲಿ ಶಾಲೆಯ ಐದಾರು ಮಕ್ಕಳಿಗೆ ಗಾಯಗಳಾಗಿವೆ. ವಿಷಯ ತಿಳಿದು ಬಂದೊಬಸ್ತ್ ಗೆ ಮಲ್ಪೆ ಠಾಣಾ ಪೊಲೀಸರು ಆಗಮಿಸಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
