ಉಡುಪಿ : ಹತ್ಯೆ ಪ್ರಕರಣ – ಕೊಲೆಗೆ ಬಳಸಿದ ಚೂರಿ ಪತ್ತೆಗೆ ಪೊಲೀಸರಿಂದ ತೀವ್ರ ಶೋಧ
ನೇಜಾರು ತಾಯಿ ಮತ್ತು ಮೂವರು ಮಕ್ಕಳನ್ನು ಭೀಕರವಾಗಿ ಕೊಲೆಗೈದ ಆರೋಪಿ ಮಂಗಳೂರು ಏರ್ ಇಂಡಿಯಾ ಎಕ್ಸ್ ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆ(39) ಬಹಳ ಯೋಜಿತವಾಗಿ ಈ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಯಾವುದೇ ಸಾಕ್ಷ್ಯಾಧಾರ ಮತ್ತು ತನ್ನ ಮುಖ ಪರಿಚಯ ಸಿಗಬಾರದೆಂಬ ಉದ್ದೇಶದಿಂದ ಪ್ರವೀಣ್ ಚೌಗುಲೆ ಈ ಪೂರ್ವ ಯೋಜಿತ ಕೊಲೆಗಾಗಿ ತನ್ನ ಕಾರು, ಮಾಸ್ಕ್, ಹಲವು ರಿಕ್ಷಾ, ಬೈಕ್, ಬಸ್‍ಗಳನ್ನು ಬಳಸಿದ್ದನು. ಅದೇ ರೀತಿ ಬ್ಯಾಗ್ ಮತ್ತು ಬ್ಯಾಗ್ ಒಳಗೆ ಹರಿತವಾದ ಚೂರಿ ಹಾಗೂ ಬಟ್ಟೆಗಳನ್ನು ಇಟ್ಟು ಕೊಂಡಿದ್ದನು. ಆರೋಪಿ ಕೊಲೆಗೆ ಬಳಸಿದ ಚೂರಿಯು ಇಡೀ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದು, ಇದಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕೊಲೆ ಮಾಡಿದ ಬಳಿಕ ಚೂರಿಯನ್ನು ತನ್ನ ಬ್ಯಾಗ್ ಒಳಗೆ ಹಾಕಿಕೊಂಡ ಆರೋಪಿ, ಅದನ್ನು ಹೆಜಮಾಡಿಯಿಂದ ಮುಂದೆ ಕಾರಿನಲ್ಲಿ ಹೋಗುವಾಗ ಸೇತುವೆಯಿಂದ ಕೆಳಗೆ ಎಸದಿದ್ದಾನೆ ಎಂದು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಅದರ ನಂತರ ಆತ ಅದನ್ನು ಮನೆ ಸಮೀಪವೇ ವಿಲೇವಾರಿ ಮಾಡಿದ್ದಾನೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದನು. ಹೀಗಾಗಿ ಪೊಲೀಸರು ಈ ಆಯುಧಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬಂಧಿತ ಕೊಲೆ ಆರೋಪಿ ಪ್ರವೀಣ್ ಚೌಗುಲೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಆತನನ್ನು ಕೃತ್ಯ ನಡೆಸಿದ ನೇಜಾರು ಮನೆಗೆ ಹಾಗೂ ಮಂಗಳೂರಿನ ಆತನ ಮನೆಗೆ ಕರೆದುಕೊಂಡು ಹೋಗಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಮಂಗಳೂರಿಗೆ ಕರೆದೊಯ್ದು ಎಲ್ಲ ರೀತಿಯ ಮಹಜರು ಪ್ರಕ್ರಿಯೆ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ. ಮುಂದೆ ಹೆಚ್ಚಿನ ತನಿಖೆಗಾಗಿ ಆತನನ್ನು ಬೆಳಗಾವಿ, ಮಹಾರಾಷ್ಟ್ರಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.