ಉಡುಪಿ: ಎನ್‍ಸಿಸಿ ವಿದ್ಯಾರ್ಥಿಗಳಿಗೆ ಸಾಗರ ನೌಕಾಯಾನ ಸಾಹಸಯಾತ್ರೆ
ಭಾರತೀಯ ಸೇನೆಗೆ ಸೇರಬಯಸುವ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಸಾಗರ ನೌಕಾಯಾನ ಸಾಹಸಯಾತ್ರೆ ಉಡುಪಿಯಲ್ಲಿ ಆಯೋಜಿಸಲಾಗಿದೆ. ಉಡುಪಿ ಸಮೀಪದ ಉದ್ಯಾವರದ ಹಿನ್ನೀರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸೀ ಸೈಲಿಂಗ್ ತರಬೇತಿ ಕಾರ್ಯಾಗಾರದಲ್ಲಿ ಹೊರರಾಜ್ಯದ ಕೆಡೆಟ್ ಗಳು ಭಾಗವಹಿಸಿರುವುದು ವಿಶೇಷವಾಗಿತ್ತು. ನೂತನ ಕೆಡೆಟ್ಗಳ ನೌಕಯಾನದ ಎಕ್ಸ್ಪೀರಿಯನ್ಸ್ ಹೇಗಿತ್ತು ಅಂತೀರಾ… ಈ ಸ್ಟೋರಿ ನೋಡಿ
ಭಾರತೀಯ ನೌಕಾದಳಕ್ಕೆ ಸೇರಬಯಸುವ ಎನ್‍ಸಿಸಿ ಕೆಡೆಟ್‍ಗಳು ದೋಣಿಯಲ್ಲಿ ಹುಟ್ಟು ಹಾಗೂ ಸೈಲ್ ಬಳಸಿಕೊಂಡು ಸ್ವಯಂ ಸಮುದ್ರ ಹಾಗೂ ವಾತಾವರಣದ ಹವಾಗುಣಕ್ಕೆ ಸಮನವಾಗಿ ಬೋಟನ್ನು ನಡೆಸುದನ್ನು ಕಲಿಯಬೇಕಾಗುತ್ತದೆ. ಇದರ ಅನುಭವ ಮತ್ತು ತರಬೇತಿಗಾಗಿ ಉಡುಪಿಯಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಉಡುಪಿ, ದ.ಕ., ಮೈಸೂರು, ಬೆಂಗಳೂರು, ಕಾರವಾರ ಹಾಗೂ ಗೋವಾದ 6 ನೇವಲ್ ಎನ್‍ಸಿಸಿ ಯುನಿಟ್‍ನ 36 ಹುಡುಗಿಯರು ಹಾಗೂ 36 ಹುಡುಗರು ಭಾಗವಹಿಸಿದ್ದು ವಿಶೇಷವಾಗಿತ್ತು.
ಶಿಬಿರದಲ್ಲಿ 100 ವರ್ಷಕ್ಕೂ ಅಧಿಕ ಹಳೆಯ ಡಿಕೆ ವೇಲರ್ ಬೋಟ್‍ನಲ್ಲಿ 5 ಪುಲ್ಲರ್ ಹಾಗೂ ಅವರನ್ನು ನಿಯಂತ್ರಿಸುವ ಕ್ಯಾಪ್ಟನ್ ಗಳು ಉದ್ಯಾವರದ 21ನೇ ಕರ್ನಾಟಕ ನೇವಲ್ ಎನ್‍ಸಿಸಿ ಯುನಿಟ್‍ನ ಬೋಟ್ ಪೂಲ್‍ನಲ್ಲಿ ತರಬೇತಿ ಪಡೆದರು. ಭಾರತೀಯ ನೌಕಾದಳಕ್ಕೆ ಸೇರಬಯಸುವ ಎನ್‍ಸಿಸಿ ಕೆಡೆಟ್‍ಗಳಿಗೆ ಈ ತರಬೇತಿ ಬಹಳಷ್ಟು ಉಪಯೋಗಕಾರಿಯಾಗಿದೆ. ಪ್ರಸ್ತುತ ಇಂಡಿಯನ್ ನೇವಿಯಲ್ಲಿ ಅತ್ಯಾಧುನಿಕ ಹಡಗುಗಳಿದ್ದು, ಅಲ್ಲಿ ಇಂತಹ ಸೈಲಿಂಗ್ ಅನುಭವ ಸಿಗುವ ಸಾಧ್ಯತೆ ಕಡಿಮೆ. ಇಲ್ಲಿ ನೌಕಾಯಾನದ ಪ್ರಾಥಮಿಕ ಅನುಭವವನ್ನು ಕೆಡೆಟ್‍ಗಳಿಗೆ ಕಲಿಸಲಾಯಿತು.
ಸಾಮಾನ್ಯವಾಗಿ ನದಿಗಳಲ್ಲಿ ನೀರು ಶಾಂತವಾಗಿ ಹರಿಯುತ್ತಿರುವುದರಿಂದ ಈ ಕಾರ್ಯ ಸುಲಭವೆನಿಸಿದರೂ ಕ್ಷಣಕ್ಷಣ ಬದಲಾಗುತ್ತಿರುವ ಆಳ ಸಮುದ್ರದಲ್ಲಿ ಇದು ಅಗ್ನಿ ಪರೀಕ್ಷೆಯಾಗಿರುತ್ತದೆ. ಗಾಳಿಯ ದಿಕ್ಕನ್ನು ಅರಿತು ಕೈಯಲ್ಲಿರುವ ಹಗ್ಗದಿಂದ ಸೈಲ್ ಅನ್ನು ನಿಯಂತ್ರಿಸಿಕೊಂಡು ನಿಗದಿತ ಗುರಿಯ ಕಡೆಗೆ ಸೈಲರ್‍ಗಳು ಬೋಟನ್ನು ಮುನ್ನುಗ್ಗಿಸಿಕೊಂಡು ಸಾಗಬೇಕಾಗುತ್ತದೆ.
ಇಂತಹ ಕಠಿನ ಕಾರ್ಯಕ್ಕೆ 72 ಕೆಡೆಟ್‍ಗಳು ಮಂಗಳೂರಿನ 5ನೇ ನೇವಲ್ ಯುನಿಟ್‍ನ ಕಮಾಂಡಿಂಗ್ ಆಫೀಸರ್ ಆಗಿರುವ ಶಿಬಿರದ ಕ್ಯಾಂಪ್ ಕಮಾಂಡೆಂಟ್ ಕಮಾಂಡರ್ ಕ್ಲೋಡಿ ಲೋಬೋ ಹಾಗೂ ಡೆಪ್ಯುಟಿ ಕ್ಯಾಂಪ್ ಕಮಾಂಡೆಂಟ್ ಭರತ್ ಕುಮಾರ್ ಅವರ ಉಸ್ತುವಾರಿಯಲ್ಲಿ ತರಬೇತಿ ನೀಡಿದರು. ಶಿಬಿರದಲ್ಲಿ ಕೆಡೆಟ್‍ಗಳು ಸೈಲಿಂಗ್, ಬೀಚ್ ಸ್ವಚ್ಛತೆ, ಗ್ರಾಮಗಳಿಗೆ ತೆರಳಿ ಪರಿಸರ ಸ್ವಚ್ಛತೆ, ಟ್ರೆಕ್ಕಿಂಗ್, ಪ್ರಥಮ ಚಿಕಿತ್ಸೆ, ಅಗ್ನಿ ಆಕಸ್ಮಿಕ ಪ್ರಾತ್ಯಕ್ಷಿಕೆ, ರಸ್ತೆ ಸುರಕ್ಷತೆ, ಕಾಲೇಜುಗಳಿಗೆ ತೆರಳಿ ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸುವುದು, ಸೈಬರ್ ಕ್ರೈಂ ಬಗ್ಗೆ ಮಾಹಿತಿ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ, ಸಾಂಸ್ಕೃತಿಕ ವಿನಿಮಯ ಮೊದಲಾದ ಚಟುವಟಿಕೆಗಳನ್ನು ನಡೆಸಿದರು.
ಒಟ್ಟಾರೆಯಾಗಿ ಹೇಳುವುದಾದರೆ ಉಡುಪಿ ಜಿಲ್ಲೆಯ ಉದ್ಯಾವರ, ಪಡುಕರೆ, ಮಲ್ಪೆ ಭಾಗ ಎನ್ ಸಿ ಸಿ ಕೆಡೆಟ್ ಗಳಿಗೆ ಸೀ ಸೈಲಿಂಗ್ ತರಬೇತಿ ಪಡೆಯಲು ಅತ್ಯಂತ ಸೂಕ್ತ ಸ್ಥಳವಾಗಿದೆ. ಅದರಲ್ಲೂ ಸಮುದ್ರದಲ್ಲಿ ಸೈಲಿಂಗ್ ನಡೆಸುವುದು ಅತ್ಯಂತ ಕ್ಲಿಷ್ಟಕರ ಸನ್ನಿವೇಶವಾಗಿದ್ದು, ಇದನ್ನು ಕೆಡೆಟ್‍ಗಳು ಹೇಗೆ ನಿಭಾಯಿಸುತ್ತಾರೆ ಎಂದು ತಿಳಿಯಲು ಈ ಶಿಬಿರ ಸಹಕಾರಿಯಾಗಲಿದೆ.