ಉಳ್ಳಾಲ: ತಲಪಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸಾರಾಯಿ ದಂಧೆ: ಮೂವರ ವಶಕ್ಕೆ
ಗಡಿಭಾಗವಾದ ತಲಪಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ರಮ ಸಾರಾಯಿ ದಂಧೆ ಜಾಲವೊಂದನ್ನು ಮಂಗಳವಾರ ತಡರಾತ್ರಿ ಪತ್ತೆಹಚ್ಚಿರುವ ಅಬಕಾರಿ ಪೊಲೀಸ್ರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ಸಂದರ್ಭ ತಲಪಾಡಿ ಮಸೀದಿ ಬಳಿಯ ನಿವಾಸಿ ಸತೀಶ್ ತಲಪಾಡಿ, ಕುಂಜತ್ತೂರು ನಿವಾಸಿಗಳಾದ ನೌಷಾದ್ ಹಾಗೂ ಅನ್ಸೀಫ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಪರಾರಿಯಾಗಿದ್ದಾನೆ ಎಂದು ಅಬಕಾರಿ ಪೊಲೀಸ್ರು ತಿಳಿಸಿದ್ದಾರೆ.
ದಾಳಿ ವೇಳೆ ಸತೀಶ್ ತಲಪಾಡಿ ಮನೆಯಿಂದ ಲೀಟರ್ ಗಟ್ಟಲೆ ಸ್ಪಿರಿಟ್ ಹಾಗೂ ಅವುಗಳ ಸಾಗಾಟಕ್ಕೆ ಅನುವಾಗಿದ್ದ ಕಾರು ಹಾಗೂ ಪ್ಯಾಕಿಂಗ್ ಗೆಂದು ದಾಸ್ತಾನಿರಿಸಿದ್ದ ಪ್ಲಾಸ್ಟಿಕ್ ಕ್ಯಾನುಗಳನ್ನು ವಶಕ್ಕೆ ಪಡೆದಿರುವುದಾಗಿ ಅಬಕಾರಿ ಪೊಲೀಸ್ರು ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆಯು ಅಬಕಾರಿ ಇಲಾಖೆಯ ಮಂಗಳೂರು ವಿಭಾಗದ ಉಪ ಅಧೀಕ್ಷಕ ಸೈಯದ್ ತಫ್ಝೀಲುಲ್ಲಾ ಮಾರ್ಗದರ್ಶನದಲ್ಲಿ ಅಬಕಾರಿ ಮಂಗಳೂರು ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ ಟಿ., ದಕ್ಷಿಣ ವಲಯ-2 ಅಬಕಾರಿ ಇಲಾಖೆಯ ನಿರೀಕ್ಷಕಿ ಕಮಲಾ ಎಚ್.ಎನ್. ನೇತೃತ್ವದಲ್ಲಿ ನಡೆದಿದೆ.