ಕಾಪು: ಬೈಕ್ ಸಹಿತ ಕಳವು ಆರೋಪಿ ಸೆರೆ
ಕಾಪು ರೆಸಿಡೆನ್ಸಿ ಕಟ್ಟಡದ ಬಳಿ ನಿಲ್ಲಿಸಲಾಗಿದ್ದ ಬೈಕ್ ನಾಪತ್ತೆಯಾದ ಬಗ್ಗೆ ಉತ್ತರ ಪ್ರದೇಶ ಮೂಲದ ವ್ಯಕ್ತಿ ನೀಡಿದ ದೂರಿನನ್ವಯ ತನಿಖೆ ನಡೆಸಿದ ಕಾಪು ಪೊಲೀಸರು ಬೈಕ್ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೂಳೂರು ನಿವಾಸಿ ಹಳೆ ಆರೋಪಿ ಸೂರಜ್ ಕೋಟ್ಯಾನ್ (೩೧), ಉತ್ತರ ಪ್ರದೇಶ ಮೂಲದ ವ್ಯಕ್ತಿ ಶಾರುಖ್ ಹಸನ್ ಎಂಬವರು ಅನೂಪ್ ಕುಮಾರ್ ಎಂಬವರಿಗೆ ಸೇರಿದ ಪಲ್ಸರ್ ಬೈಕನ್ನು ಕಾಪು ರೆಸಿಡೆನ್ಸಿ ಬಳಿ ರಾತ್ರಿ ನಿಲ್ಲಿಸಿ ಹೋಗಿದ್ದು, ಮರುದಿನ ಬೆಳಗ್ಗೆ ಬಂದಾಗ ಬೈಕ್ ಕಳವಾಗಿತ್ತು. ಈ ಬಗ್ಗೆ ಕಾಪು ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಕಾಪು ಪಿಎಸ್ ಐ ಅಬ್ದುಲ್ ಖಾದರ್ ಹಾಗೂ ಅಪರಾಧ ವಿಭಾಗದ ಪಿಎಸ್ ಐ ಪುರುಷೋತ್ತಮ ಸಹಿತ ಸಿಬ್ಬಂದಿಗಳು ಕಾರ್ಯಚರಣೆ ಆರಂಭಿಸಿದ್ದು, ಈ ಹಿಂದೆಯೂ ಬೈಕ್ ಕಳವು ನಡೆಸಿ ಕುಖ್ಯಾತಿ ಹೊಂದಿದ್ದ ಮೂಳೂರು ನಿವಾಸಿ ಸೂರಜ್ ಕೋಟ್ಯಾನ್ ಬಗ್ಗೆ ಸಂಶಯಹೊಂದಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. ಬೈಕ್ ಕಳವು ಮಾಡಿದಲ್ಲದೆ, ಪೆಟ್ರೋಲ್ ಖಾಲಿಯಾದ ಬೈಕನ್ನು ಪಕ್ಕದ ಪೊದೆಯಲ್ಲಿ ಅಡಗಿಸಿಟ್ಟಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಈತನ ವಿರುದ್ಧ ಕಾಪು, ಉಡುಪಿ, ಮಂಗಳೂರಿನ ಕೋಣಾಜೆ, ಕಂಕನಾಡಿ, ಪಣಂಬೂರು ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳವು ಹಾಗೂ ದರೋಡೆ ಪ್ರಕರಣಗಳು ದಾಖಲಾಗಿತ್ತು.