ಉಳ್ಳಾಲ : ಲಾರಿ ನಂಬರ್ ಪ್ಲೇಟ್ ಗ್ರೀಸ್ ಹಚ್ಚಿ ಮರಳು ಸಾಗಾಟ
ಮಂಗಳೂರು : ಲಾರಿಗಳ ನಂಬರ್ ಪ್ಲೇಟ್‌ಗೆ ಗ್ರೀಸ್ ಹಚ್ಚಿ ಹಾಗೂ ಸ್ಟಿಕ್ಕರ್ ಬಳಸಿ ಮರೆಮಾಚಿಸಿ ರಾತ್ರಿಯಿಡೀ ವ್ಯಾಪಕವಾಗಿ ಮರಳು ಸಾಗಾಟವನ್ನು ಕೊಣಾಜೆ, ಮಂಗಳೂರು ಗ್ರಾಮಾಂತರ, ಉಳ್ಳಾಲ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಪೊಲೀಸರ ಸಮ್ಮುಖದಲ್ಲೇ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ನಿನ್ನೆ ತಡರಾತ್ರಿ ಅಡ್ಯಾರ್ ಕಣ್ಣೂರು ಸಮೀಪ ನಂಬರ್ ಪ್ಲೇಟ್ ಮಾಸಿದ ಮರಳು ಸಾಗಾಟದ ಲಾರಿ ಡಿವೈಡರಿಗೆ ಢಿಕ್ಕಿ ಹೊಡೆದ ಪರಿಣಾಮ ಸಾರ್ವಜನಿಕರು ಲಾರಿಗಳನ್ನು ತಡೆಹಿಡಿದು ನಡೆಸಿದ ರಸ್ತೆತಡೆ ಉದ್ವಿಘ್ನ ಸ್ಥಿತಿಗೆ ತಲುಪಿದೆ.
ಉಳ್ಳಾಲ, ಕೋಟೆಪುರ, ಕಣ್ಣೂರು, ಫರಂಗಿಪೇಟೆ, ಹರೇಕಳ, ಪಾವೂರು ಭಾಗಗಳಿಂದ ಮರಳು ಸಾಗಾಟ ನಡೆಯುತ್ತಿದ್ದು, ರಾ.ಹೆ.66 ಮತ್ತು ರಾ.ಹೆ 75 ರಲ್ಲಿ ಮಾಸಿದ ನಂಬರ್ ಪ್ಲೇಟಿನ ಲಾರಿಗಳ ಮೂಲಕ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮಾ.19 ರ ರಾತ್ರಿ ವೇಳೆ ಒಂದರ ಹಿಂದೆ ಇನ್ನೊಂದರಂತೆ ಮರಳು ಸಾಗಾಟದ ಲಾರಿಗಳು ಬಿ.ಸಿರೋಡ್ ಮಾರ್ಗವಾಗಿ ಚಲಿಸುವ ಸಂದರ್ಭ , ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದಕ್ಕೆ ಢಿಕ್ಕಿ ಹೊಡೆಯುವುದರಿಂದ ತಪ್ಪಿ ರಸ್ತೆ ಡಿವೈಡರಿಗೆ ಹಾಗೂ ಬ್ಯಾರಿಕೇಡಿಗೆ ಢಿಕ್ಕಿ ಹೊಡೆದಿದೆ. ಅಜಾಗರೂಕತೆಯ ಲಾರಿ ಸಂಚಾರದಿಂದ ಅಪಾಯ ಎದುರಿಸಿದ ಕಾರು ಚಾಲಕರು ರಸ್ತೆಗಿಳಿದು ಲಾರಿಯನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಜಮಾಯಿಸಿ ಲಾರಿಗಳನ್ನು ತಡೆಹಿಡಿಯಲು ಯತ್ನಿಸಿದ್ದಾರೆ. ಅದರೆ ನಂಬರ್ ಮಾಸಿದ ಎರಡೂ ಮರಳು ಸಾಗಾಟದ ಲಾರಿಗಳು ಅಲ್ಲಿಂದ ತಲೆಮರೆಸಿಕಿಂಡಿದೆ. ಆನಂತರ ಸಾಲು ಸಾಲುಗಳಾಗಿ ಬರುತ್ತಿದ್ದ ಲಾರಿಗಳನ್ನು ತಡೆಹಿಡಿದ ಸಾರ್ವಜನಿಕರು ಪೊಲೀಸರು ಬರುವವರೆಗೆ ರಸ್ತೆ ತಡೆ ನಡೆಸಿದ್ದಾರೆ.
ಈ ನಡುವೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದು, ಉದ್ರಿಕ್ತರನ್ನು ಸಮಾಧಾನಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಮತ್ತೆ ಲಾರಿಗಳು ಬರುವುದನ್ನು ತಡೆಹಿಡಿದ ಸಾರ್ವಜನಿಕರು ನಂಬರಿಲ್ಲದೇ ಇರುವುದೆ ವೀಡಿಯೋ ತೆಗೆದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸದೇ ಇರುವುದನ್ನು ಪ್ರಶ್ನಿಸಿದ್ದಾರೆ. ನಂಬರ್ ಪ್ಲೇಟ್ ಮಾಸಿದ ರೀತಿಯಲ್ಲಿದ್ದ ಒಂದು ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.