ಬೆಳ್ತಂಗಡಿ–ಕಡಬದಲ್ಲಿ ಕಾಡಾನೆಗಳ ಅಟ್ಟಹಾಸ! ನಿಡ್ಲೆ ಗ್ರಾಮದಲ್ಲಿ ತೋಟಕ್ಕೆ ನುಗ್ಗಿ ಬಾಳೆ–ಅಡಿಕೆ ಕೃಷಿ ಹಾನಿ
ಕೊಕ್ಕಡ: ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳ ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ದಾಳಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ರೈತರ ಶ್ರಮದ ಫಲವನ್ನು ಕ್ಷಣಾರ್ಧದಲ್ಲಿ ನಾಶಮಾಡುತ್ತಿರುವ ಘಟನೆಗಳು ಅತಿಯಾಗಿ ಹೆಚ್ಚಾಗಿವೆ. ಇತ್ತೀಚಿನ ಘಟನೆಯಾಗಿ ಶನಿವಾರ ರಾತ್ರಿ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬಾರೆಗುಡ್ಡೆ ಪ್ರದೇಶದಲ್ಲಿ ಕುಶಾಲಪ್ಪ ಗೌಡ ಎಂಬ ರೈತರ ತೋಟಕ್ಕೆ ಕಾಡಾನೆ ದಾಳಿ ನಡೆಸಿ, ಅಪಾರ ಪ್ರಮಾಣದ ಬಾಳೆ, ತೆಂಗು, ಅಡಿಕೆ ತೋಟವನ್ನು ಹಾನಿಗೊಳಿಸಿದೆ.
ಕಾಡಾನೆಗಳ ಗುಂಪು ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಹಲವು ಬಾಳೆಗಿಡಗಳನ್ನು ಹಾಳುಮಾಡಿದ್ದು, ತೆಂಗು ಮತ್ತು ಅಡಿಕೆ ಮರಗಳನ್ನೂ ಮುರಿದು ಹಾಕಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಳಗಿನ ಜಾವ ತೋಟ ಪರಿಶೀಲನೆಗೆ ತೆರಳಿದ ರೈತರು ಕಾಡಾನೆಗಳ ಹೆಜ್ಜೆ ಗುರುತು ಮತ್ತು ಹಾನಿಗೊಳಗಾದ ಬೆಳೆಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಭಾಗದ ರೈತರಲ್ಲಿ ಕಾಡಾನೆ ಭೀತಿ ಗಂಭೀರವಾಗಿದ್ದು, ದಿನವೂ ಹೊಸ ಹೊಸ ಹಾನಿಯ ಸುದ್ದಿಗಳು ಕೇಳಿಬರುತ್ತಿವೆ. ಪ್ರತಿ ರಾತ್ರಿ ಕಾಡಾನೆಗಳು ಗ್ರಾಮಗಳಿಗೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ರೈತರು ಆತಂಕದಿಂದ ನಿದ್ದೆ ಕಳೆದುಕೊಂಡಿದ್ದಾರೆ. ಈ ಪ್ರದೇಶದ ರೈತರು ಸ್ವಯಂ ರಕ್ಷಣೆಗೆ ವಾಟ್ಸಪ್ ಗ್ರೂಪ್ ರಚಿಸಿಕೊಂಡು, ಕಾಡಾನೆಗಳ ಚಲನ–ವಲನಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳುತ್ತಾ ಎಚ್ಚರಿಕೆ ನೀಡಿಕೊಳ್ಳುತ್ತಿದ್ದಾರೆ.
ಅಧಿಕಾರಿಗಳು ಕಾಡಾನೆಗಳ ತಡೆಗೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ನಿತ್ಯ ಹಾನಿ ಹೆಚ್ಚಾಗುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ ಕಳೆದ ಹಲವು ತಿಂಗಳುಗಳಿಂದ ಈ ಪ್ರದೇಶದಲ್ಲಿ ಕಾಡಾನೆಗಳ ಸಂಚಾರ ತೀವ್ರವಾಗಿದ್ದು, ಕೆಲ ತೋಟಗಳಲ್ಲಿ ಹಲವು ಲಕ್ಷ ರೂ. ಮೌಲ್ಯದ ಹಾನಿ ಸಂಭವಿಸಿದೆ. ಸ್ಥಳೀಯರು ರಾತ್ರಿ ಹೊತ್ತು ಪಟಾಕಿ ಸಿಡಿಸಿ, ಬೆಳಕಿನ ವ್ಯವಸ್ಥೆ ಮಾಡಿ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಾನಿ ಕಡಿಮೆಯಾಗದ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯ ಅರಣ್ಯ ಅಧಿಕಾರಿಗಳು ಘಟನೆಯ ಕುರಿತು ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿದ್ದು, ಹಾನಿಗೊಳಗಾದ ಬೆಳೆಗಳಿಗೆ ಪರಿಹಾರದ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

















