ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳಿಗೆ ಟರ್ಪಾಲ್ಗಳ ವಿತರಣೆ
ನಗರದ ಹೊಯಿಗೆ ಬಜಾರ್, ಜಪ್ಪಿನಮೊಗರು, ಕೂಳೂರು, ಮುಳಿಹಿತ್ಲು, ತೋಕೂರು ಪರಿಸರದಲ್ಲಿ ಗುಡಿಸಲು ನಿರ್ಮಿಸಿ ವಾಸವಾಗಿದ್ದ ಅಲೆಮಾರಿ ಸಮುದಾಯದ ಶಿಳ್ಳೆಕ್ಯಾತ ಕುಟುಂಬಗಳಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಟರ್ಪಾಲ್ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾದ ತೌಕ್ತೆ ಚಂಡಮಾರುತದ ಪ್ರಭಾವದಿಂದಾಗಿ ಅಲೆಮಾರಿ ಶಿಳ್ಳಕ್ಯಾತ ಕುಟುಂಬದ ಗುಡಿಸಲುಗಳ ಟರ್ಪಾಲ್ಗಳು ತೀವ್ರವಾಗಿ ಹಾನಿಯಾಗಿದ್ದವು. ಜಿಲ್ಲೆಯಲ್ಲಿ ಮುಂಗಾರು ಮಳೆಯೂ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಈ ಸಮುದಾಯದವರಿಗೆ ಅಳತೆಯ ಟರ್ಪಾಲ್ಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಅದರಂತೆ ಇಂದು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಟರ್ಪಾಲ್ ಗಳನ್ನು ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳಿಗೆ ವಿತರಿಸಿದರು.
ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಬಜಾಲ್ ಮಾತನಾಡಿ, ಜಿಲ್ಲೆಯಲ್ಲಿ ಮಾನ್ಸೂನ್ ಆರಂಭವಾಗಿರುವುದರಿಂದ ಶಿಳ್ಯಕ್ಯಾತ ಸಮುದಾಯದವರ ಸುರಕ್ಷತೆ ಹಿತದೃಷ್ಟಿಯಿಂದ ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳಿಗೆ ಟರ್ಪಾಲ್ಗಳ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿದ್ದರು.