ಆಲಂಪುರಿ ರಸ್ತೆ ಬದಿಯ ಗುಡ್ಡ ಕುಸಿತ: ಅಡಿಕೆ ಮರಗಳು ಧರಶಾಹಿ
ಬಂಟ್ವಾಳ: ಶುಕ್ರವಾರ ರಾತ್ರಿಯಿಂದಲೇ ಸುರಿದ ಭಾರೀ ಮಳೆಗೆ ಬಿ.ಸಿ.ರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕೆಳಗಿನ ವಗ್ಗ ಬಳಿಯ ಆಲಂಪುರಿ ಎಂಬಲ್ಲಿ ರಸ್ತೆ ಬದಿಯ ಗುಡ್ಡ ಕುಸಿದು ಸ್ಟ್ಯಾನಿ ಲೋಬೋ ಎಂಬವರಿಗೆ ಸೇರಿದ ತೋಟದ ೫೦ಕ್ಕೂ ಅಧಿಕ ಅಡಿಕೆ ಮರಗಳು ಧರಶಾಹಿಯಾಗಿದೆ.
ಬಿ.ಸಿ. ರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ರಸ್ತೆ ಬದಿಯ ಗುಡ್ಡವನ್ನು ಅಗೆದಿರುವ ಪರಿಣಾಮ ಗುಡ್ಡ ಕುಸಿಯಲು ಕಾರಣ ಎಂದು ಆರೋಪಿಸಲಾಗಿದೆ. ಮಳೆ ಇದೇ ರೀತಿ ಮುಂದುವರಿದ್ದಲ್ಲಿ ಇನ್ನಷ್ಟು ಭೂ ಕುಸಿತ ಉಂಟಾಗಿ ಅಡಿಕೆ ಮರಗಳು ಉರುಳುವ ಆತಂಕ ಎದುರಾಗಿದೆ.
ಸಜೀಪಮುನ್ನೂರು ಗ್ರಾಮದ ಅಮೀನಮ್ಮ ಎಂಬವರ ಮನೆಯ ಒಂದು ಭಾಗದ ಮಣ್ಣಿನ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಸಜೀಪಮೂಡ ಗ್ರಾಮದ ನಗ್ರಿ ಎಂಬಲ್ಲಿ ಗುಡ್ಡ ಕುಸಿದು ಕೂಸಪ್ಪ ನಾಯ್ಕ ಎಂಬವರ ಮನೆ ಅಪಾಯಕ್ಕೆ ಸಿಲುಕಿದೆ. ಮುಂಜಾಗೃತಕ್ರಮವಾಗಿ ಮನೆಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದ್ದು ಅವರು ನಾವೂರಿನಲ್ಲಿರುವ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ನೇಮಕ್ಕು ಎಂಬವರ ಮನೆಯ ಹಿಂಭಾಗದ ಧರೆ ಕುಸಿದಿದೆ. ಅಬ್ದುಲ್ ಖಾದ್ರಿ ಎಂಬರ ಮನೆಯ ಆವರಣ ಗೋಡೆ ಕುಸಿದು ನಷ್ಟ ಸಂಭವಿಸಿದೆ. ಗುಂಡಿ ಮಜಲು ಎಂಬಲ್ಲಿ ಚೆನಪ್ಪ ಪೂಜಾರಿ ಎಂಬವರ ಮನೆಯ ಹಿಂಭಾಗದ ತಡಗೋಡೆ ಕುಸಿದು ಬಿದ್ದಿದೆ. ಬಂಟ್ವಾಳ ಕಸ್ಬಾ ಗ್ರಾಮದ ಮಣಿ ಎಂಬಲ್ಲಿ ಬಾಲಕೃಷ್ಣ ಗೌಡ ಎಂಬವರ ಆವರಣ ಗೋಡೆ ಕಸಿದ್ದು ಕಲ್ಲುಗಳು ಕೆಲಭಾಗಕ್ಕೆ ಉದುರಿ ಬಿದ್ದಿದೆ. ಮುಗ್ದಾಲ್ ಗುಡ್ಡೆ ಎಂಬಲ್ಲಿ ಶಕುಂತಲಾ ಎಂಬವರ ಮನೆ ಹೆಂಚುಗಳು ಬಿದ್ದು ಹಾನಿ ಉಂಟಾಗಿದೆ. ಮೊಡಂಕಾಪುವಿನ ದೀಪಿಕಾ ಪ್ರೌಢಶಾಲೆ ಬಳಿ ಆವರಣ ಗೋಡೆ ಕುಸಿದಿದೆ.