ಒಮಾನ್: ಕಡಲಲ್ಲಿ ಮುಳುಗಿ ಮೃತಪಟ್ಟ ಉಳ್ಳಾಲದ ಯುವಕರು
ಎರಡು ವರ್ಷದ ಹಿಂದೆ ಉಳ್ಳಾಲದಿಂದ ಒಮಾನ್ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ಇಬ್ಬರು ಯುವಕರು ಅಲ್ಲಿನ ಕಡಲಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಉಳ್ಳಾಲದ ರಿಜ್ವಾನ್ ಅಲೇಕಳ (25), ಉಳ್ಳಾಲ ಕೋಡಿ ನಿವಾಸಿ ಜಹೀರ್ (25) ಮೃತಪಟ್ಟವರು.
ಒಮಾನ್ನಲ್ಲಿ ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಯುವಕರು ದುಕ್ಕುಂ ಎಂಬ ಕಡಲ ತೀರಕ್ಕೆ ಶುಕ್ರವಾರ ಸಂಜೆ ವಿಹಾರಕ್ಕೆ ತೆರಳಿದ್ದರು. ರಿಜ್ವಾನ್ ಕಡಲಿನ ಅಲೆಯಲ್ಲಿ ಸಿಲುಕಿದ್ದು ಮುಳುಗುತ್ತಿದ್ದಾಗ ಜಹೀರ್ ಆತನ ರಕ್ಷಣೆಗೆ ತೆರಳಿದ್ದಾನೆ. ಈ ವೇಳೆ, ಇಬ್ಬರೂ ಸಮುದ್ರ ನೀರಿನಲ್ಲಿ ಸಿಲುಕಿ ನೀರಾಪಾಲಾಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಉಳ್ಳಾಲ ಕೋಡಿ ಜಹೀರ್ ಮೃತದೇಹ ಪತ್ತೆಯಾಗಿದ್ದು, ರಿಜ್ವಾನ್ಗಾಗಿ ಹುಡುಕಾಟ ಮುಂದುವರಿದಿದೆ. ಜಹೀರ್ಗೆ ಈಗಾಗಲೇ ಮದುವೆ ನಿಶ್ವಯವಾಗಿತ್ತು. ಕೆಲವೇ ದಿನಗಳಲ್ಲಿ ಆತ ತಾಯ್ನಾಡಿಗೆ ಆಗಮಿಸುವ ತಯಾರಿಯಲ್ಲಿದ್ದ ಎಂದು ತಿಳಿದುಬಂದಿದೆ.