ಕೋಸ್ಟಲ್ ಬರ್ತ್, ಸಾಗರ ಮಾಲಾ ಯೋಜನೆಯ ವಿರುದ್ದ ಬೆಂಗರೆಯಲ್ಲಿ ಮೀನುಗಾರರಿಂದ ’ದೋಣಿಯೊಂದಿಗೆ ಪ್ರತಿಭಟನೆ’
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸಾಗರ ಮಾಲಾ ಯೋಜನೆ ಕರ್ನಾಟಕ ಕರಾವಳಿ ಜಿಲ್ಲೆಗಳ ಮೀನುಗಾರ ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ಮಂಗಳೂರು ಬೆಂಗರೆಯ ಪಲ್ಗುಣಿ ನದಿ ದಂಡೆಯಲ್ಲಿ ಸಾಗರ ಮಾಲಾ ಯೋಜನೆಯಡಿ ದೇಶೀಯ ಹಡಗುಗಳ ನಿಲುಗಡೆಗಾಗಿ ಕೋಸ್ಟಲ್ ಬರ್ತ್ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು ಸ್ಥಳೀಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಬಲವಾದ ಪೆಟ್ಟು ನೀಡುತ್ತದೆ, ದುಡಿಮೆಯ ಅವಕಾಶವನ್ನು ನಾಶಗೊಳಿಸುತ್ತದೆ. ಮೀನುಗಾರರ ಬದುಕಿಗೆ ಮಾರಕವಾದ ಈ ಯೋಜನೆ ಕೈ ಬಿಡಬೇಕು ಎಂದು ಆಗ್ರಹಿಸಿ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರು ಇಂದು “ದೋಣಿಯೊಂದಿಗೆ ಪ್ರತಿಭಟನೆ, ಹಾಗೂ ಮೀನುಗಾರರ ಮನೆಗಳಲ್ಲಿ ಪ್ರತಿಭಟನೆ” ನಡೆಸಲಿದ್ದಾರೆ.
ಸಾಗರ ಮಾಲಾ ಯೋಜನೆ ಮೀನುಗಾರರ ಭವಿಷ್ಯವನ್ನು ಕರಾಳಗೊಳಿಸುತ್ತಿದೆ. ಕಾರವಾರದಿಂದ ಮಂಗಳೂರುವರಗೆ ಜಾರಿಗೊಳ್ಳುತ್ತಿರುವ ಸಾಗರ ಮಾಲಾ ಯೋಜನೆಯ ಪ್ರಾಜೆಕ್ಟ್ ಗಳು ಸ್ಥಳೀಯ ಮೀನುಗಾರರ ದುಡಿಮೆಯ ಅವಕಾಶಗಳನ್ನು ನಾಶಗೊಳಿಸುತ್ತಿರುವುದು ಯೋಜನೆ ಜಾರಿಯ ಆರಂಭದ ದಿನಗಳಲ್ಲೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದು ಮೀನುಗಾರಿಕಾ ಉದ್ಯಮವನ್ನು ಸಾಂಪ್ರದಾಯಿಕವಾಗಿ ಮೀನುಗಾರಿಕೆಯನ್ನೇ ಅವಲಂಬಿಸಿರುವ ಸಮುದಾಯಗಳಿಂದ ಕಿತ್ತುಕೊಂಡು, ಕಾರ್ಪೊರೇಟ್ ಕಂಪೆನಿಗಳ ಪಾಲಾಗಿಸುವ ಹುನ್ನಾರವನ್ನು ಹೊಂದಿದೆ ಎಂದು “ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ” ದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.
ಅವರು ಮಂಗಳೂರಿನ ಬೆಂಗರೆಯಲ್ಲಿ ಸಾಗರ ಮಾಲಾ, ಕೋಸ್ಟಲ್ ಬರ್ತ್ ಯೋಜನೆಯ ವಿರುದ್ದ “ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ” ಹಮ್ಕಿಕೊಂಡಿದ್ದ “ದೋಣಿಯೊಂದಿಗೆ ಮೀನುಗಾರರ ಪ್ರತಿಭಟನೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದರು. ಮುಂದುವರಿದು ಅವರು, ಬೆಂಗರೆ ಪ್ರದೇಶದಲ್ಲಿ ಐನೂರಕ್ಕೂ ಹೆಚ್ಚು ನಾಡದೋಣಿಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಸಾಗರ ಮಾಲಾ, ಕೋಸ್ಟಲ್ ಬರ್ತ್ ಯೋಜನೆ ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ನಾಶಗೊಳಿಸುತ್ತಿದೆ. ಮೀನುಗಾರರು ನಾಡದೋಣಿ ಕಟ್ಟುವ ನದಿ ದಂಡೆಗಳನ್ನು ಆಕ್ರಮಿಸಿ ಅತಂತ್ರಗೊಳಿಸುತ್ತಿದೆ.
\
ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ಅವಲಂಬಿಸಿರುವ ನೂರಾರು ಮೀನುಗಾರ ಕುಟುಂಬಗಳು ಬದುಕಿನ ನೆಲೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸಾಗರ ಮಾಲಾ, ಕೋಸ್ಟಲ್ ಬರ್ತ್ ಯೋಜನೆಗೆ ಸಂಬಂಧಿಸಿ ಸ್ಥಳೀಯ ಜನರಿಗೆ ಮಾಹಿತಿಯನ್ನೇ ನೀಡದೆ ಜನರ ಮೇಲೆ ಹೇರಲಾಗಿದೆ. ಇನ್ನಷ್ಟು ಯೋಜನೆಗಳು ಬೆಂಗರೆಯ ನದಿ, ಸಮುದ್ರ ದಂಡೆಯಲ್ಲಿ ತರಲು ಸರಕಾರ ಪ್ರಸ್ತಾವನೆ ಸಿದ್ದಪಡಿಸಿಕೊಂಡಿದೆ. ಈ ಎಲ್ಲಾ ಸಂದರ್ಭದಲ್ಲಿ ಮೀನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ಗ್ರಾಮಸ್ಥರನ್ನು ಕತ್ತಲಲ್ಲಿ ಇಡಲಾಗಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಆರೋಪಿಸಿದ ಅವರು, ಇದರ ವಿರುದ್ದ ಮೀನುಗಾರಿಕಾ ವೃತ್ತಿ ನಿರತ ಜನರು ಜಾತಿ, ಧರ್ಮಗಳ ಭೇದ ಮರೆತು ಮೀನುಗಾರ ಸಮುದಾಯವಾಗಿ ಪ್ರತಿರೋಧ ಒಡ್ಡಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ದೊರೆತ ನಂತರ ಬೆಂಗರೆ, ತಣ್ಣೀರು ಬಾವಿ ಪ್ರದೇಶದ ಸಾಂಪ್ರದಾಯಿಕ ಮೀನುಗಾರರು ಹಾಗೂ ಅವರ ಕುಟುಂಬಸ್ಥರು ತಮ್ಮ ದೋಣಿಗಳ ಮೇಲೆ, ಮನೆಗಳ ಮುಂಭಾಗ ತಮ್ಮ ಬೇಡಿಕೆಗಳ ಪ್ಲೇ ಕಾರ್ಡ್ ಹಿಡಿದು, ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಮೀನುಗಾರ ಕುಟುಂಬಗಳು ಈ ವಿಶಿಷ್ಟ ರೀತಿಯ ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರದ ಗಮನ ಸೆಳೆಯಲು ಯತ್ನಿಸಿದರು.
ಸಾಂಪ್ರದಾಯಿಕ ಮೀನುಗಾರಿಕೆಗೆ ಅಪಾಯ ಒಡ್ಡುವ, ಮೀನು, ಮರುವಾಯಿ, ಏಡಿ, ಚಿಪ್ಪುಗಳ ಸಂತತಿ ಉತ್ಪತ್ತಿ ತಾಣಗಳನ್ನು ನಾಶಗೊಳಿಸುವ ಸಾಗರ ಮಾಲಾ ಕೋಸ್ಟಲ್ ಬರ್ತ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸಾಂಪ್ರದಾಯಿಕ ಮೀನುಗಾರರ ಕುಟುಂಬಗಳು ತಮ್ಮ ದೋಣಿಯ ಜೊತೆಗೆ ಹಾಗೂ ತಮ್ಮ ಮನೆಗಳಲ್ಲಿ ಪ್ರತಿಭಟನೆ ನಡೆಸುವ ಹೋರಾಟವನ್ನು “ಪಲ್ಗುಣಿ ನಾಡದೋಣಿ ಮೀನುಗಾರರ ಸಂಘ, ಮಂಗಳೂರು” ನೇತೃತ್ವದಲ್ಲಿ ಬೆಂಗರೆಯಲ್ಲಿ ಹಮ್ಮಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷ ಅಬ್ದುಲ್ ತಯ್ಯೂಬ್ ಬೆಂಗರೆ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ಅಬ್ದುಲ್ ತಯ್ಯೂಬ್, ಸಲಹೆಗಾರ ನೌಷದ್ ಬೆಂಗರೆ, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಹನೀಫ್ ಬೆಂಗರೆ, ತೌಸೀಫ್, ನಾಸಿರ್, ಖಲೀಲ್ ಬೆಂಗರೆ ಮೀನುಗಾರ ಮುಖಂಡರಾದ ಅನ್ವರ್ ಬೆಂಗರೆ, ಇಸ್ಮಾಯಿಲ್, ಸಾದಿಕ್,
ಪಿ ಜಿ ರಫೀಕ್, ಇಬ್ರಾಹಿಂ ಖಲೀಲ್, ಫಯಾಜ್ ಬೆಂಗರೆ, ಅಜೀಜ್, ಸರ್ಫರಾಜ಼್ ಮತ್ತಿತರರು ವಹಿಸಿದ್ದರು.