ನಿಂತಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ: ಸವಾರ ಮೃತ್ಯು
ಕಾಪು: ಲಾರಿ ಚಾಲಕ ವಿಶ್ರಾಂತಿಗಾಗಿ ಮಣ್ಣರಸ್ತೆಯಲ್ಲಿ ನಿಲ್ಲಿಸಿದ ಲಾರಿಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾಪು ಠಾಣಾ ವ್ಯಾಪ್ತಿಯ ಮೂಳೂರಿನಲ್ಲಿ ನಡೆದಿದೆ.
ಬೆಳಗಾವಿಯಿಂದ ಕೇರಳಕ್ಕೆ ಸಕ್ಕರೆ ಹೇರಿಕೊಂಡು ಸಾಗುತ್ತಿದ್ದ ಲಾರಿ ಚಾಲಕ ಪಕ್ಕದ ಮರದಡಿ ಗಾಡಿ ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್ ಸವಾರ ತೊಕ್ಕೊಟ್ಟಿನ ನಿವಾಸಿ ದಿವಂಗತ ವಿಶ್ವನಾಥ ಶೆಟ್ಟಿ ಅವರ ಮಗ ಶರಣ್ ಶೆಟ್ಟಿ (32) ಅತಿ ವೇಗವಾಗಿ ಬಂದು ನಿಂತ ಲಾರಿಯ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸಹಿತ ಲಾರಿಯ ಒಳ ಭಾಗಕ್ಕೆ ನುಸುಳಿದ್ದಾನೆ. ಗಂಭೀರ ಗಾಯಗೊಂಡ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಯುವಕ ಪಡುಬಿದ್ರಿ ಬೀಡು ಬಳಿಯ ಜಾರಂದಾಯ ರಸ್ತೆಯ ಸಂಬಂಧಿ ಸುಧಾಕರ ಶೆಟ್ಟಿಯವರ ಮನೆಗೆ ಬಂದಿದ್ದು ಅವರ ಮನೆಯಿಂದ ಸ್ಕೂಟಿಯನ್ನು ಪಡೆದು ಉಡುಪಿ ಕಡೆಗೆ ಹೋಗಿದ್ದ. ಮರಳಿ ಬರುವ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರು ಹಾಗೂ ನವಯುಗ ಕಂಪನಿಯ ಸಿಬ್ಬಂದಿ ಲಾರಿಯಡಿ ಸಿಲುಕಿ ಕೊಂಡಿದ್ದ ಸ್ಕೂಟಿಯನ್ನು ಹೊರತೆಗೆದಿದ್ದಾರೆ.ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಠಾಣಾಧಿಕಾರಿ ರಾಘವೇಂದ್ರ ಸಿ, ಬೇಟಿ ನೀಡಿ ಪರಿಶೀಲಿಸಿದ್ದಾರೆ.