ಪುತ್ತೂರಿನಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನ ಹಸ್ತಾಂತರ
ಸ್ವಚ್ಛ ಭಾರತ ಮಿಷನ್ ಹಾಗೂ ಗ್ರಾ.ಪಂ.15 ನೇ ಹಣಕಾಸು ಯೋಜನೆಯಡಿ ತಾಲೂಕಿನ ಆರು ಗ್ರಾ.ಪಂ.ಗಳಿಗೆ ತಲಾ 7.80 ಲಕ್ಷ ರೂ. ವೆಚ್ಚದ ಘನ ತ್ಯಾಜ್ಯ ವಿಲೇವಾರಿ ವಾಹನ ಹಸ್ತಾಂತರ ಕಾರ್ಯಕ್ರಮ ಪುತ್ತೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ವಾಹನ ಹಸ್ತಾಂತರಿಸಿ ಮಾತನಾಡಿ, ಸ್ವಚ್ಛ ಭಾರತದಕಲ್ಪನೆ ಸಾಕಾರವಾಗಲು ಗ್ರಾಮ ಮಟ್ಟದಿಂದಲೇ ಜಾಗೃತಿಯ ಆವಶ್ಯವಿದೆ. ಹೀಗಾಗಿ ಗ್ರಾಮ ಪಂಚಾಯತ್‌ಗಳಲ್ಲಿ ಸ್ವಚ್ಛತೆಯ ನಿರ್ವಹಣೆ ದೃಷ್ಟಿಯಿಂದ ವಾಹನ ಒದಗಿಸಲಾಗಿದೆ. ಮುಂದಿನ ಗಾಂಧಿ ಜಯಂತಿ ಸಂದರ್ಭದಲ್ಲಿ ತಾಲೂಕಿನ ಒಂದು ಸ್ವಚ್ಛ ಗ್ರಾ.ಪಂ. ಅನ್ನು ಗುರುತಿಸಿ ಶಾಸಕನಾಗಿ ವೈಯಕ್ತಿಕ ನೆಲೆಯಲ್ಲಿ 10ಸಾವಿರ ರೂ.ನಗದು ಬಹುಮಾನ ನೀಡಿ ಪ್ರೋತ್ಸಾಹಿ ಸಲಾಗುವುದು ಎಂದರು.
ಬಲ್ನಾಡು, ಬೆಟ್ಟಂಪಾಡಿ, ಒಳಮೊಗ್ರು, ಬಜತ್ತೂರು, ಕಬಕ ಹಾಗೂ ಬನ್ನೂರು ಗ್ರಾ.ಪಂ.ಗಳಿಗೆ ವಾಹನ, ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ತಾ.ಪಂ.ಇಓ ನವೀನ್ ಭಂಡಾಡಿ, ಶೈಲಜಾ, ಬನ್ನೂರು ಗ್ರಾ.ಪಂ.ಅಧ್ಯಕ್ಷೆ ಜಯ ರಮೇಶ್, ಬಲ್ನಾಡು ಗ್ರಾ.ಪಂ.ಅದ್ಯಕ್ಷೆ ಇಂದಿರಾ ಎಸ್ ರೈ, ಬೆಟ್ಟಂಪಾಡಿ ಗ್ರಾ.ಪಂ.ಅಧ್ಯಕ್ಷೆ ಪವಿತ್ರಾ, ಒಳಮೊಗ್ರು ಗ್ರಾ.ಪಂ.ಅಧ್ಯಕ್ಷೆ ತ್ರಿವೇಣಿ ಮೊದಲಾದವರು ಉಪಸ್ಥಿತರಿದ್ದರು.