ಬಿ.ಸಿ. ರೋಡ್: ಕಾರ್ಮಿಕರಿಗೆ ಕಿಟ್ ಸಿಗದ ಹಿನ್ನೆಲೆ: ಅಧಿಕಾರಿಗಳ ವಿರುದ್ಧ ಆಕ್ರೋಶ
ಬಂಟ್ವಾಳ: ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ನೀಡಲಾಗುವ ಆಹಾರದ ಕಿಟ್‌ಪಡೆಯಲು ಬಿ.ಸಿ.ರೋಡಿಗೆ ಆಗಮಿಸಿದ್ದ ಕಾರ್ಮಿಕರು ಕಿಟ್ ಸಿಗದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆದಿದೆ. ಸ್ಟಾಕ್ ಲಭ್ಯವಿಲ್ಲದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕಾರ್ಮಿಕರು ವಾಪಸ್ಸಾಗಬೇಕಾಯಿತು.
ಕಳೆದ ಕೆಲ ದಿನಗಳಿಂದ ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಕಾರ್ಮಿಕರಿಗೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಆಹಾರದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಮಂಗಳವಾರವೂ ಆಹಾರದ ಕಿಟ್‌ಗಳನ್ನು ವಿತರಿಸಲಾಗುತ್ತದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ್ದು ಈ ಬಗ್ಗೆ ಮಾಹಿತಿ ಪಡೆದಂತಹ ತಾಲೂಕಿನ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಮಹಿಳೆಯರು ಸಹಿತ ಪುರುಷ ಕಾರ್ಮಿಕರು ಬೆಳಿಗ್ಗಿನಿಂದಲೇ ರಂಗೋಲಿ ಸಭಾಂಗಣದ ಮುಂಭಾಗ ಜಮಾಯಿಸಿದ್ದರು. ಆದರೆ ಸ್ಟಾಕ್ ಲಭ್ಯವಿಲ್ಲದ ಕಾರಣ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಲು ಸಾಧ್ಯವಾಗದೇ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಬೇಕಾಯಿತು. ಬಡಗ ಕಜೆಕಾರು, ಬೆಂಜನ ಪದವು ಸಜೀಪ ಮತ್ತಿತರ ದೂರದ ಭಾಗಗಳಿಂದ ಬಂದಂತಹ ಕಾರ್ಮಿಕರು ಕಿಟ್ ಸಿಗದ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಾಜಿ ಸಚಿವ ಬಿ.ರಮನಾಥ ರೈ ಮತ್ತಿತರರು ಸ್ಥಳಕ್ಕೆ ತೆರಳಿ ಕಿಟ್ ವಿತರಣೆಯಲ್ಲಿ ಕಾಮಿಕರಿಗೆ ಆಗಿರುವ ತೊಂದರೆಯ ಬಗ್ಗೆ ಅಧಿಕಾರಿಗಳೊಂದಿಗೆ ಮಾತು ಕತೆ ನಡೆಸಿ ಕಾರ್ಮಿಕರನ್ನು ಸಮಾಧಾನಪಡಿಸಿದರು. ಈ ಸಂದರ್ಭ ಬೇಬಿ ಕುಂದರ್, ಮಹಮ್ಮದ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು.
ಕಿಟ್ ಸ್ಟಾಕ್ ಇಲ್ಲದ ಕಾರಣ ಜುಲೈ 8 ಹಾಗೂ 9 ತಾರೀಖಿಗೆ ಕಾರ್ಮಿಕರನ್ನು ಬರಲು ತಿಳಿಸಿದ್ದೆವು. ಆದರೆ ಇಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಹೇಗೆ ಬಂದಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಕಾರ್ಮಿಕ ನಿರೀಕ್ಷಕಿ ಮರ್ಲಿನ್ ಡಿಸೋಜಾ ತಿಳಿಸಿದರು.