ಮಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
ಮಂಗಳೂರಿನ ನೆಹರೂ ಮೈದಾನದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಎಸ್. ಅಂಗಾರ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಬಳಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ನವೆಂಬರ್ 2ರಿಂದ 1-5ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪ್ರಾರಂಭವಾಗಲಿದೆ. ಈಗಾಗಲೇ 3,20,000 ವಿದ್ಯಾರ್ಥಿಗಳು ಅತ್ಯಂತ ಸಂತಸದಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ನಿತ್ಯದ ಹಾಜರಾತಿ ಪ್ರಮಾಣ ಉತ್ತಮವಾಗಿದೆ. 27 ಶಾಲೆಗಳ ಭೌತಿಕ ಸೌಲಭ್ಯಗಳಿಗೆ 2.70 ಕೋಟಿ ರೂ.ಗಳ ಅನುದಾನ ಕಾಯ್ದಿರಿಸಿ, ಕ್ರಿಯಾ ಯೋಜನೆಯ ಅನುಮೋದನೆಗೆ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಭಾರತೀಯ ಭಾಷೆ ಸಂಸ್ಕೃತಿಗಳು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ಚಿಮಾತ್ಯ ಮಹನಿಯರೂ ಕೊಡುಗೆ ನೀಡಿದ್ದಾರೆ. ಕನ್ನಡದ ಮೊದಲ ದಿನಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆ ರೆ. ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಸಂಪಾದಕತ್ವದಲ್ಲಿ 1842 ರಲ್ಲಿ ಮಂಗಳೂರಿನಿಂದ ಪ್ರಕಟಣೆಯನ್ನು ಪ್ರಾರಂಭಿಸಿರುವುದು ನಮ್ಮ ಹೆಮ್ಮೆ. ಕೋವಿಡ್-19 ಸೋಂಕಿನ ಎರಡನೇ ಅಲೆ ನಿರ್ವಹಣೆಯಲ್ಲಿ ಜೀವದ ಹಂಗು ತೊರೆದು ತಮ್ಮನ್ನು ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಷಕರು, ಇತರ ವೈದ್ಯಕೇತರ ಸಿಬ್ಬಂದಿ, ಪೊಲೀಸರು, ಜಿಲ್ಲಾ ಆಡಳಿತ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೆನೆಯುವುದಾಗಿ ಅವರು ಹೇಳಿದರು.
ಈ ಬಾರಿ ಸಮಾಜಸೇವೆ,ವೈದ್ಯಕೀಯ ವಲಯ, ಶಿಕ್ಷಣ, ಸಾಹಿತ್ಯ, ರಂಗಭೂಮಿ, ಕ್ರೀಡೆ, ಪತ್ರಿಕೋದ್ಯಮ, ಕೃಷಿ, ನೃತ್ಯ, ಕಲಾ ಕ್ಷೇತ್ರ, ಯಕ್ಷಗಾನ ಒಳಗೊಂಡಂತೆ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಸಾಧನೆ ಮೆರೆದ ಒಟ್ಟು 58 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಮಂಗಳೂರಿನ ಬೊಕ್ಕಪಟ್ಣದ ಅಥ್ಲೆಟಿಕ್ ಕೋಚ್ ದಿನೇಶ್ ಕುಂದರ್ ಅವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಸಿದ್ದು, ಅವರಿಗೆ ಸಚಿವ ಎಸ್. ಅಂಗಾರ ಪ್ರದಾನ ಮಾಡಿದರು.
ನಾಟಕ ರಂಗಭೂಮಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಹಾಗೂ ವಿ4 ನ್ಯೂಸ್ನ ಸಿಪಿಎಲ್ ಖ್ಯಾತಿಯ ರವಿ ರಾಮಕುಂಜ ಅವರಿಗೆ ಈ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಸ್ತುತ ಬಹರೈನ್ನಲ್ಲಿ ವಾಸ ಮಾಡುತ್ತಿರುವ ಹೊರನಾಡು ಕನ್ನಡಿಗ ಪ್ರಶಸ್ತಿ ಕಮಲಾಕ್ಷ ಆಮೀನ್ ಅವರಿಗೆ ಲಭಿಸಿದೆ. ಇನ್ನುಳಿಂದ 58 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇನ್ನು ವೀರ ವಿನಾಯಕ ಜನಸೇವಾ ಟ್ರಸ್ಟ್ನ ಅಕ್ಷಯ ಬೊಕ್ಕಪಟ್ಣ ಮಂಗಳೂರು, ಬಿಲ್ಲವ ಸಮಾಜ ಸೇವಾ ಸಂಘ ಮುಲ್ಕಿ, ಬೈಕಂಪಾಡಿ ವಿದ್ಯಾರ್ಥಿ ಸಂಘ ಯುವಕ ಮಂಡಲ ಮೀನಕಳಿಯ ಮಂಗಳೂರು, ಹೆಲ್ಪ್ ಇಂಡಿಯಾ ಪೌಂಡೇಶನ್ ಉಳ್ಳಾಲ, ಸೇರಿದಂತೆ ಜಿಲ್ಲೆಯ 18 ಸಂಘ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಶಾಸಕರಾದ ಯು.ಟಿ. ಖಾದರ್, ಡಾ, ವೈ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.