ಮೂಡುಬಿದಿರೆಯಲ್ಲಿ 20ನೇ ರಾಜ್ಯಮಟ್ಟದ ವುಶು ಕ್ರೀಡಾಕೂಟ
ಮೂಡುಬಿದಿರೆ: ವುಶು ಕ್ರೀಡೆಯನ್ನು ಜಿಲ್ಲೆಯ ಕ್ರೀಡಾಪಟುಗಳಿಗೆ, ಆಸಕ್ತ ಸಂಘ ಸಂಸ್ಥೆಗಳಿಗೆ ಮತ್ತು ಕ್ರೀಡಾಪ್ರೇಮಿಗಳಿಗೆ ಪರಿಚಯಿಸುವ ಸಲುವಾಗಿ 20ನೇ ರಾಜ್ಯ ಮಟ್ಟದ ವುಶು ಕ್ರೀಡಾಕೂಟವನ್ನು ಮೂಡುಬಿದಿರೆ ನುಡಿಸಿರಿ ವಿರಾಸತ್ ಸಭಾಂಗಣದಲ್ಲಿ ಅ.1ರಿಂದ 4ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ, ಈ ಕ್ರೀಡಾಕೂಟಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿವಿಧ ವಿಭಾಗದಲ್ಲಿ ಆಯ್ಕೆಯಾದ ಸುಮಾರು 600 ವಿದ್ಯಾರ್ಥಿಗಳು ತಮ್ಮ ಜಿಲ್ಲೆಗಳನ್ನು ಸಾನ್ಯೋ ಮತ್ತು ತಾವ್ಲೋ ಸ್ಪರ್ಧೆಯ ಸುಮಾರು 69 ವಿಭಾಗದಲ್ಲಿ ಇಲ್ಲಿ ಪ್ರತಿನಿಧಿಸಲಿದ್ದಾರೆ ಎಂದು ದ.ಕ.ವುಶು ಅಸೋಸಿಯೇಶನ್ ಗೌರವಾಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವುಶು ಕ್ರೀಡೆ ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯಿಂದ ಮಾನ್ಯತೆಯನ್ನು ಪಡೆದಿದೆ. ಏಷ್ಯನ್ ಗೇಮ್ಸ್ ಮತ್ತು ರಾಷ್ಟ್ರೀಯ ಗೇಮ್ಸ್ಗಳಲ್ಲಿ ಸೇರ್ಪಡೆಯಾಗಿದೆ. ನಮ್ಮ ಸಂಸ್ಥೆಯು ಕಳೆದ 3 ವರ್ಷಗಳಿಂದ ಜಿಲ್ಲೆಯಲ್ಲಿ ವುಶು ಕ್ರೀಡಾ ತರಬೇತಿ ಮತ್ತು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸತತ 2 ವರ್ಷಗಳಿಂದ ವುಶು ದ.ಕ. ಅಸೋಸಿಯೇಶನ್ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲೆಯನ್ನು ಮತ್ತು ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ 2ನೇ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದು, 10 ಕ್ರೀಡಾಪಟುಗಳು ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದರು. ಕ್ರೀಡಾಪಟುಗಳಿಗೆ ತರಬೇತಿಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ತರಬೇತುದಾರರಾದ ನಿತಿನ್ ಎನ್ ಸುವರ್ಣ ನೀಡುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ನಮ್ಮ ಸಂಸ್ಥೆಯು ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದವರು ವಿವರಿಸಿದರು.
ಅಕ್ಟೋಬರ್ 1ರಂದು ಸಾಯಂಕಾಲ 5 ಗಂಟೆಗೆ ಆಳ್ವಾಸ್ ನುಡಿಸಿರಿ ವಿರಾಸತ್ ಸಭಾಂಗಣದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ವುಶು ಅಸೋಸಿಯಶನ್ ಅಧ್ಯಕ್ಷ ವಿ.ಸಿ. ಚರಂಥಿಮಟ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯಂ ಯಡಪಡಿತ್ತಾಯ ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ, ಶಾರದ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಂ. ಬಿ. ಪುರಾಣಿಕ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಅ.4ರ ಸಾಯಂಕಾಲ 5 ಗಂಟೆಗೆ ನಡೆಯಲಿದೆ.
ದ.ಕ.ವುಶು ಸಂಸ್ಥೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಉಪಾಧ್ಯಕ್ಷ ಗುರುಚಂದ್ರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನಿತಿನ್ ಎನ್ ಸುವರ್ಣ ಉಪಸ್ಥಿತರಿದ್ದರು.