ಯುಪಿಸಿಎಲ್ ಪ್ರದೇಶಕ್ಕೆ ಪರಿಸರ ಅಧಿಕಾರಿಗಳ ತಂಡ ಭೇಟಿ: ರಾಸಾಯನಿಕ ನೀರು ಬಿಡುತ್ತಿರುವ ವಿರುದ್ಧ ಆಕ್ರೋಶ
ಕೃಷಿಕರ ಜೀವನಾಡಿ ನೀರಿನ ಮೂಲಕ್ಕೆ ಯುಪಿಸಿಎಲ್ ಕಂಪನಿ ಗುಪ್ತವಾಗಿ ರಾಸಾಯನಿಕ ನೀರು ಬಿಡುತ್ತಿರುವ ಬಗ್ಗೆ ಸ್ಥಳೀಯ ಮಳೆಯೊರ್ವರು ಆರೋಪಿಸಿದ ಮೇರೆಗೆ ಉಡುಪಿ ಪರಿಸರ ಅಧಿಕಾರಿಗಳ ತಂಡ ಪರಿಶೀಲಿಸಿ ಬಾವಿ, ತೊರೆ ಸಹಿತ ಇತರೆ ನೀರಿನ ಮೂಲಗಳಿಂದ ನೀರು ಸಂಗ್ರಹಿಸಿ ಪ್ರಯೋಗಲಯಕ್ಕೆ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರಿನ ಕೃಷಿಕ ಕರಿಯಶೆಟ್ಟಿ ಎಂಬವರ ಮನೆಯ ಸುತ್ತಮುತ್ತಲ ಹತ್ತಾರು ಮನೆಗಳಿದ್ದು ಎಲ್ಲರೂ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ಈ ಭಾಗದ ನೂರಾರು ಎಕ್ರೆ ಕೃಷಿ ಭೂಮಿ ಹಡಿಲು ಬಿದ್ದಿದೆ. ಕಾರಣ ಕೃಷಿ ಚಟುವಟಿಕೆ ನಡೆಸಿದರೂ ಜನವಿರೋಧಿ ಯುಪಿಸಿಎಲ್ ತನ್ನ ಒಡಲಿನ ರಾಸಾಯನಿಕ ನೀರನ್ನು ಹೊತ್ತಲ್ಲದ ಹೊತ್ತಲ್ಲಿ ಕೃಷಿಕರು ಕೃಷಿ ಚಟುವಟಿಕೆಗೆ ಉಪಯೋಗಿಸುವ ನೀರಿನ ಮೂಲಕ ಹರಿಯ ಬಿಡುವ ಮೂಲಕ, ಈ ನೀರನ್ನು ಬಳಸಿ ನಡೆಸಿದ ಕೃಷಿ ಚಟುವಟಿಕೆಗಳು ನಾಶವಾಗುತ್ತಿದ್ದು ಈ ಬಗ್ಗೆ ಅದೇಷ್ಟೋ ಬಾರಿ ಕಂಪನಿ ಸಹಿತ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾರಣ ಇಲ್ಲಿ ಸ್ಥಳೀಯರಾದ ನಮಗೆ ಕಂಪನಿಯಿಂದ ಯಾವುದೇ ಸಮಸ್ಯೆಯಿಂದರೂ ವರದಿ ಮಾತ್ರ ಕಂಪನಿಯ ಪರವಾಗಿಯೆ ಬರುತ್ತಿದೆ. ಕಾರಣ ಇಷ್ಟರವರಗೆ ಪರಿಶೀಲನೆಗಾಗಿ ಬಂದ ಅಧಿಕಾರಿಗಳ ಜೇಬು ತುಂಬಿಸುವ ಕಾರ್ಯ ಕಂಪನಿಯ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂಬುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಬಂದ ಮಹಿಳಾ ಅಧಿಕಾರಿಯವರು ನಮ್ಮೆಲ್ಲಾ ಸಮಸ್ಯೆಯನ್ನು ಆಲಿಸಿದ್ದಾರೆ. ನಮ್ಮ ಕಷ್ಟದ ಜೀವನ ಅವರಿಗೆ ಮನವರಿಕೆಯಾಗಿದೆ ಎಂದು ನಾವು ಭಾವಿಸಿದ್ದೇವೆ. ಮುಂದೆ ಪರಿಸರ ಅಧಿಕಾರಿಗಳಿಂದ ಬರುವ ವರದಿ ಸತ್ಯ ಅಂಶಗಳನ್ನು ಹೊತ್ತು ತರುತ್ತೆ ಕಂಪನಿಗೆ ಇದರಿಂದ ಹಿನ್ನಡೆಯಾಗಲಿದೆ ಎಂಬ ನಮ್ಮ ನಿರೀಕ್ಷೆ ಸುಳ್ಳಾಗದಿರಲಿ ಎನ್ನುತ್ತಾರೆ ಕಂಪನಿಯಿಂದ ನೋವು ತಿನ್ನುತ್ತಿರುವ ಸಂತ್ರಸ್ಥರು.
ಸ್ಥಳಕ್ಕೆ ಬಂದ ಕಂಪನಿಯ ಅಧಿಕಾರಿ ನಮ್ಮ ಕಂಪನಿಯಿಂದ ಈ ರಾಸಾಯನಿಕ ನೀರು ಬಂದಿದ್ದೇ ಇಲ್ಲ ಎಂದಾಗ ಆಕ್ರೋಶ ವ್ಯಕ್ತ ಪಡಿಸಿದ ಗ್ರಾಮಸ್ಥರು ಕಪ್ಪು ರಾಸಾಯನಿಕ ನೀರು ಹರಿಯುತ್ತಿರುವ ವಿಡಿಯೋ ಚಿತ್ರೀಕರಣವನ್ನು ತೋರಿಸಿ ಕಂಪನಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಎಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಂತ್ ಕುಮಾರ್, ಸ್ಥಳೀಯ ಮಹಿಳೆಯೊರ್ವರು ಚಿತ್ರೀಕರಿಸಿ ಕಳುಹಿಸಿದ ವಿಡಿಯೋ ನೋಡಿ ಆತಂಕಗೊಂಡು ಪರಿಸರ ಅಧಿಕಾರಿಗಳನ್ನು ಸ್ಥಳಕ್ಕೆ ಬರ ಮಾಡಿ ಪರಿಶೀಲನೆ ನಡೆಸಲಾಗಿದೆ. ಇದೊಂದು ಕಂಪನಿಗೆ ಅಂತಿಮ ಎಚ್ಚರಿಕೆ ಮುಂದೆ ತಮ್ಮ ಚಾಲಿ ಮುಂದುವರಿಸಿದರೆ ನ್ಯಾಯಾಲಯದ ಮೂಲಕ ತಕ್ಕ ಪಾಠ ಕಲಿಸಲಾಗುವುದೆಂದರು.
ಪರಿಸರ ಅಧಿಕಾರಿ ವಿಜಯ ಹೆಗೆ ಮಾದ್ಯಮದೊಂದಿಗೆ ಮಾತನಾಡಿ, ನಾನು ಇಲ್ಲಿನ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇನೆ. ಅವರು ಸ್ಥಳಕ್ಕೆ ಆಗಮಿಸಬಹುದು ಇಲ್ಲ ಸ್ಥಳೀಯರನ್ನು ಕರೆಯಿಸಿಕೊಳ್ಳಬಹುದು, ಮಳೆಗಾಲವಾಗಿದ್ದರಿಂದ ನೀರಿನಲ್ಲಿರುವ ದೋಷಗಳು ಪ್ರಯೋಗಲಯದಲ್ಲಿ ನೂರಕ್ಕೆ ನೂರು ರುಜುವಾತು ಆಗಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪದೇ ಪದೇ ಇಲ್ಲಿನ ನೀರನ್ನು ಪರೀಕ್ಷೆ ಒಳಪಡಿಸುವ ವ್ಯವಸ್ಥೆ ಇಲಾಖಾ ವತಿಯದ ನಡೆಸಲಿದ್ದೇವೆ ಎಂದರು. ಯುಪಿಸಿಎಲ್ ಅಧಿಕಾರಿ ಮಾದ್ಯಮದೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಈ ವೇಳೆ ಹೋರಾಟಗಾರ ನಾಗೇಶ್ ಭಟ್, ಸಹಿತ ಗ್ರಾ.ಪಂ. ಪ್ರತಿನಿಧಿಗಳು ಹಾಗೂ ಸ್ಥಳೀಯ ಸಂತ್ರಸ್ಥರು ಸ್ಥಳದಲ್ಲಿದ್ದರು.
ವರದಿ: ಸುರೇಶ್ ಎರ್ಮಾಳ್