ರಾಜ್ ಕುಮಾರ್, ಪಾರ್ವತಮ್ಮ ಸಮಾಧಿಗೆ ನಿರಂತರ ಭೇಟಿ ನೀಡುತ್ತಿದ್ದ ಪುನಿತ್ ರಾಜ್ ಕುಮಾರ್
ಬೆಂಗಳೂರು, ಅ 30; ಪವರ್ ಸ್ಟಾರ್ ಪುನಿತ್ ಗೆ ತಂದೆ ರಾಜ್ ಕುಮಾರ್ ಮತ್ತು ತಾಯಿ ಪಾರ್ವತಮ್ಮ ಅವರ ಬಗ್ಗೆ ಅಪಾರ ಗೌರವ. ತನ್ನ ತಂದೆ, ತಾಯಿ ಬಗ್ಗೆ ಇನ್ನಿಲ್ಲದ ಪ್ರೀತಿ ಹೊಂದಿದ್ದ ಕಿರಿ ಮಗ.
ರಾಜ್ ಕುಮಾರ್ ಅವರಿಗೆ ಪುನಿತ್ ಎಂದರೆ ಎಲ್ಲಿಲ್ಲದ ಮಮಕಾರ. ವಾತ್ಸಲ್ಯ. ಪಾರ್ವತಮ್ಮ ಅವರಿಗೂ ಅಷ್ಟೇ ಕಿರಿಯ ಮಗನನ್ನು ಕಂಡರೆ ಅಷ್ಟೇ ಅಕ್ಕರೆ.
ಪುನಿತ್ ರಾಜ್ ಕುಮಾರ್ ಅವರ ತಂದೆ ಮತ್ತು ತಾಯಿ ಬಗೆಗಿನ ಪ್ರೀತಿ ಬಗ್ಗೆ ಬೇರೆ ಯಾರೂ ಹೇಳುವುದು ಬೇಕಿಲ್ಲ. ಕಂಠೀರವ ಸ್ಟುಡಿಯೋ ಪಕ್ಕದಲ್ಲಿರುವ ರಾಜ್ ಕುಮಾರ್ ಸಮಾಧಿ ನೋಡಿಕೊಳ್ಳುವ ಕಾವಲುಗಾರರು ಸದಾ ಕಾಲ ಪುನಿತ್ ಅವರನ್ನು ಸ್ಮರಿಸಿಕೊಳ್ಳುತ್ತಾರೆ.
ಇತ್ತೀಚಿಗೆ ಅಲ್ಲಿಗೆ ಭೇಟಿ ನೀಡಿ ಅವರ ಜತೆ ಮಾತನಾಡಿದ ಸಂದರ್ಭದಲ್ಲಿ ಪುನಿತ್ ರಾಜ್ ಕುಮಾರ್ ಅವರಿಗೆ ತಂದೆ ಮತ್ತು ತಾಯಿ ಬಗೆಗಿನ ಪ್ರೀತಿ ಬಗ್ಗೆ ತಿಳಿದು ಯುವ ನಟನ ಬಗ್ಗೆ ಇನ್ನಷ್ಟು ಗೌರವ ಹೆಚ್ಚಾಯಿತು.
ಬೆಂಗಳೂರಿನಲ್ಲಿರುವಾಗ ಪುನಿತ್ ಬಹುತೇಕ ಸಂದರ್ಭದಲ್ಲಿ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿ ಬರುತ್ತಿದ್ದರು. ರಾಜ್ ಕುಟುಂಬ ಸದಸ್ಯರು ಮತ್ತು ರಾಜ್ ಅಭಿಮಾನಿಗಳಲ್ಲಿ ಅತಿ ಹೆಚ್ಚು ಬಾರಿ ಸಮಾಧಿಗೆ ಭೇಟಿ ಕೊಡುತ್ತಿದ್ದವರಲ್ಲಿ ಪುನಿತ್ ರಾಜ್ ಕುಮಾರ್ ಮೊದಲಿಗರು.
ಪ್ರತಿ ಬಾರಿ ಭೇಟಿ ನೀಡಿದಾಗಲೂ ಪುನಿತ್ ಅವರು ಸಮಾಧಿ ಸ್ಥಳವನ್ನು ನೋಡಿಕೊಳ್ಳುವ ಕಾವಲುಗಾರಿಗೆ ಹಣ ನೀಡುತ್ತಿದ್ದರು. ಪುನಿತ್ ರಾಜ್ ಕುಮಾರ್ ಬಂದರೆ ಇವರಿಗೆ ಎಲ್ಲಿಲ್ಲದ ಖುಷಿ. ಜತೆಗೆ ಭಕ್ಷೀಸು ಪಡೆಯುವ ಸಂಭ್ರಮ.
ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಲು ಪುನಿತ್ ರಾಜ್ ಕುಮಾರ್ ಅತೀವ ಕಾಳಜಿ ಹೊಂದಿದ್ದರು. ಕಂಠೀರವ ಸ್ಟುಡಿಯೋ ಅಧಿಕಾರಿಗಳ ಜತೆಯೂ ಸಹ ಸಾಕಷ್ಟು ಬಾರಿ ಈ ಕುರಿತು ಚರ್ಚೆ ನಡೆಸುತ್ತಿದ್ದರು. ಅಧಿಕಾರಿ ಮತ್ತು ಸಿಬ್ಬಂದಿ ನೀಡುವ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಿದ್ದರು. ಅತ್ಯಂತ ನಯ, ವಿನಯ ಹೊಂದಿದ್ದ ನಟ ಎಂದು ಇಲ್ಲಿನ ಅಧಿಕಾರಿಗಳು ಕೂಡ ಸ್ಮರಿಸಿಕೊಳ್ಳುತ್ತಾರೆ.
ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಸದಸ್ಯರು ವಿಶೇಷ ಸಂದರ್ಭಗಳಲ್ಲಿ ರಾಜ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುತ್ತಾರೆ.
ಇದೇ ಸ್ಥಳದಲ್ಲಿ ಚಿತ್ರನಟ ಅಂಬರೀಷ್ ಅವರ ಸಮಾಧಿ ಸ್ಥಳವೂ ಸಹ ಇದೆ. ಆದರೆ ಇಲ್ಲಿಗೆ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್ ಅವರು ಸಹ ಆಗಾಗ್ಗೆ ಬಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ಆದರೆ ಪುನಿತ್ ರಾಜ್ ಕುಮಾರ್ ಇವರೆಲ್ಲರಿಗೂ ವಿಭಿನ್ನವಾದ ವ್ಯಕ್ತಿತ್ವದವರು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.