ಶಿರ್ವದ ಮುಟ್ಲಪಾಡಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಕಾಪು ತಹಶೀಲ್ದಾರ್ ದಾಳಿ
ಶಿರ್ವ: ಅಕ್ರಮ ಮರಳುಗಾರಿಕೆ ಅಡ್ಡೆಗೆ ಕಾಪು ತಶೀಲ್ದಾರ್ ಪ್ರತಿಭಾ ದಾಳಿ ನಡೆಸಿದ್ದಾರೆ.ಕಳೆದ ಹಲವು ದಿನಗಳಿಂದ ಶಿರ್ವ ಬಳಿಯ ಮುಟ್ಲುಪಾಡಿ ಸೇತುವೆ ಕೆಳಗಡೆ ಕೇರಳ ಮೂಲದ ಕೋಶಿ ಎನ್ನುವಾತನ ತೋಟದ ಜಾಗದಲ್ಲಿ ಅಕ್ರಮ ಮರಳುಗಾರಿಕೆಯನ್ನು ಎಗ್ಗಿಲದೆ ನಡೆಸುತ್ತಿದ್ದರು. ಹಗಲಿನಲ್ಲೇ ರಾಜಾರೋಶವಾಗಿ ಹೊಳೆಗೆ ಡ್ರಜ್ಜಿಂಗ್ ಮಿಶಿನ್‌ಗಳನ್ನು ಹಾಕಿ ಮರಳು ತೆಗೆದು ನೂರಾರು ಲೋಡುಗಳನ್ನು ರಾಜಾರೋಶವಾಗಿ ಸಾಗಿಸುತ್ತಿದ್ದರು.
ಸ್ಥಳೀಯರು ಶಿರ್ವ ಪೊಲೀಸರಿಗೆ ಹಾಗೂ ಗಣಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರ ಮೂಲಕ ಕಾಪು ತಶೀಲ್ದಾರ್ ಗೆ ಮಾಹಿತಿ ನೀಡಿದ್ದು ವಿಷಯ ತಿಳಿದ ಪ್ರಮಾಣಿಕ ಅಧಿಕಾರಿ ತಶೀಲ್ದಾರ್ ಪ್ರತಿಭಾ ಅಕ್ರಮ ಅಡ್ಡೆಗೆ ದಾಳಿ ನಡೆಸಿದರು.ಕಳೆದ ಹಲವು ಸಮಯಗಳಿಂದ ಅಕ್ರಮ ಮರಳುಗಾರಿಕೆಯ ಬಗ್ಗೆ ಸ್ಥಳೀಯರು ಪೊಲೀಸರು ಹಾಗೂ ಗಣಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಿರ್ವ ಬಳಿಯ ಮುಟ್ಲಪಾಡಿಯ ಬಳಿ ಅಕ್ರಮ ಮರಳುಗಾರಿಕೆಗೆ ತಶೀಲ್ದಾರ್ ದಾಳಿ ನಡೆಸುವ ಮಾಹಿತಿ ಸೋರಿಕೆ ಆದ ಹಿನ್ನಲೆಯಲ್ಲಿ ದಂಧೆಕೋರರು ಸ್ಥಳದಲ್ಲಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಲಾರಿಗಳನ್ನು ಸ್ಥಳದಿಂದ ಸ್ಥಳಾಂತರ ಮಾಡಿದ್ದರು.ಹೊಳೆಯಲ್ಲಿದ್ದ ಡ್ರಜ್ಜಿಂಗ್ ಮೆಶಿನ್ ಇದ್ದ ದೋಣಿಯನ್ನು ತೆರವುಗೊಳಿಸಲಾಗಿತ್ತು.ಅದ್ರೆ ಪೈಪುಗಳನ್ನ ಅಲ್ಲೇ ಹೊಳೆಯಲ್ಲೇ ಬಿಟ್ಟು ಪರಾರಿಯಾಗಿದ್ದರು.ಮತ್ತೊಂದು ಭಾಗದಲ್ಲಿ ಜೆಸಿಬಿಯನ್ನು ಲಾರಿ ಮೂಲಕ ಸಾಗಿಸಲು ಪ್ರಯತ್ನ ಪಡುವಷ್ಟರಲ್ಲಿ ತಶೀಲ್ದಾರ್ ದಾಳಿ ನಡೆಸಿಯಾಗಿತ್ತು.ಹೀಗಾಗಿ ಜೆಸಿಬಿ ಸಹಿತ ಲಾರಿಯನ್ನು ತಶೀಲ್ದಾರ್ ವಶಪಡಿಸಿಕೊಂಡರು.
ಕಾಪು ಭಾಗದಲ್ಲಿ ಹಲವೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎನ್ನುವ ಕೂಗು ಕೇಳಿ ಬಂದಿದೆ.