ಸೌಕೂರು ಏತ ನೀರಾವರಿ ಯೋಜನೆ ಮೂಲ ನಕ್ಷೆ ಬದಲಾದರೆ ಪರಿಶೀಲನೆ : ಬಿ.ವೈ ರಾಘವೇಂದ್ರ ಹೇಳಿಕೆ
ಕುಂದಾಪುರ: ಆಕಸ್ಮಾತ್ ಸೌಕೂರು ಏತ ನೀರಾವರಿ ಯೋಜನೆಯ ಮೂಲನಕ್ಷೆ ಬದಲಾವಣೆಯಾಗಿದೆ ಎಂದಾದರೆ ಈ ಬಗ್ಗೆ ಪರಿಶೀಲನೆ ಮಾಡೋಣ. ಕುಡಿಯಲು ಹಾಗೂ ಕೃಷಿಗೆ ನೀರು ನೀಡಲು ಸೌಕೂರು ಹಾಗೂ ಸಿದ್ದಾಪುರ ಎರಡು ಯೋಜನೆಗಳು ಆಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.
ಇಲ್ಲಿನ ಹೆಮ್ಮಾಡಿಯ ಜ್ಯೂವೆಲ್ ಪಾರ್ಕ್ನ ಜಯಶ್ರೀ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಆರೋಪಗಳ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ಅವರು ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು, ಸಂಸದರು ಮತ್ತು ನಾವೇ ಒಟ್ಟಾಗಿ ಸೌಕೂರು ಏತ ನೀರಾವರಿ ಯೋಜನೆಯನ್ನು ನಕ್ಷೆ ತಯಾರಿಸಿ, ಪ್ರಾಸ್ತಾವನೆ ಮಂಡಿಸಿ ಮಂಜೂರಾತಿ ಮಾಡಿಸಿರುವುದರಿಂದ ನಕ್ಷೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸಂಸದರು, ಆಕಸ್ಮಾತ್ ಬದಲಾವಣೆಯಾಗಿದೆ ಎಂದಾದರೆ ಈ ಬಗ್ಗೆ ಪರಿಶೀಲನೆ ಮಾಡೋಣ. ಇದರಲ್ಲಿ ಯಾವುದೆ ದುರುದ್ದೇಶ ಅಥವಾ ಸ್ವಾರ್ಥ ಇಲ್ಲ. ಶಾಸಕರ ತೋಟಕ್ಕೆ ನೀರು ಹಾಯಿಸಿಕೊಳ್ಳಬೇಕು ಎನ್ನುವ ದುರುದ್ದೇಶಗಳೂ ಇಲ್ಲ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.