ಇದು ಜನಾಶೀರ್ವಾದ ಅಲ್ಲ, ಜನರ ಕ್ಷಮೆ ಕೋರುವ ಯಾತ್ರೆ ಆಗಬೇಕು: ಸಲೀಂ ಅಹ್ಮದ್
‘ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುತ್ತಿದ್ದು, ಅವರು ಜನಾಶೀರ್ವಾದ ಯಾತ್ರೆ ಬದಲು ಜನರ ಕ್ಷಮೆ ಕೋರುವ ಯಾತ್ರೆ ನಡೆಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಕಿಡಿಕಾರಿದ್ದಾರೆ.
‘ಕೋವಿಡ್ 2ನೇ ಅಲೆಯಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣರಾಗಿದ್ದಕ್ಕೆ, ಸ್ವರ್ಗ ತೋರಿಸುತ್ತೇವೆ ಎಂದು ಅಧಿಕಾರಕ್ಕೆ ಬಂದು ಜನರಿಗೆ ನರಕ ತೋರಿಸುತ್ತಿರುವುದಕ್ಕೆ, ಕೇಂದ್ರದ ಮಲತಾಯಿ ಧೋರಣೆ, ರಾಜ್ಯಕ್ಕೆ ಬರಬೇಕಾದ ಅನುದಾನ ತರಲು ವಿಫಲರಾಗಿರುವುದಕ್ಕೆ, 2019ರಿಂದ ಆಗುತ್ತಿರುವ ನೆರೆಗೆ ಪರಿಹಾರ ನೀಡದಿರುವುದಕ್ಕೆ, ಜಿಎಸ್ಟಿ ಪಾಲು 13 ಸಾವಿರ ಕೋಟಿ ನೀಡದಿರುವುದಕ್ಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಬಿಜೆಪಿ ನಾಯಕರು ರಾಜ್ಯದ ಜನರ ಮುಂದೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಜನ ಬಿಜೆಪಿ ವಿರುದ್ಧ ಆಕ್ರೋಶದ ಯಾತ್ರೆ ನಡೆಸುತ್ತಾರೆ’ ಎಂದು ಎಚ್ಚರಿಸಿದರು.
‘2ನೇ ಅಲೆ ಎಚ್ಚರಿಕೆ ನೀಡಿದ ನಂತರವೂ ಬಿಜೆಪಿ ಸರ್ಕಾರ ಉಪಚುನಾವಣೆ, ನಾಯಕತ್ವ ಬದಲಾವಣೆ ವಿಚಾರವಾಗಿ ಮೈಮರೆಯಿತು. ಪರಿಣಾಮ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಸರ್ಕಾರವೇ ಉತ್ತರಿಸಬೇಕು. ಮೂರನೇ ಅಲೆ ತಡೆಯಲು ಯಾವ ಕ್ರಮ ಕೈಗೊಂಡಿದ್ದಾರೆ ಯಾರಿಗೂ ಗೊತ್ತಿಲ್ಲ’ ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ರಾಜ್ಯದ 25 ಸಂಸದರು ಆಯ್ಕೆಯಾಗಿದ್ದು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಇಲ್ಲಿ ಹುಲಿಗಳಂತೆ ಮಾತನಾಡುವ ಸಂಸದರು ಮೋದಿ ಮುಂದೆ ಇಲಿಗಳಾಗುತ್ತಾರೆ. ರಾಜ್ಯಕ್ಕೆ ಬರಬೇಕಾದ ಪಾಲು ತರಲು ಹೋರಾಟ ಮಾಡುತ್ತಿಲ್ಲ. ಹೀಗಿರುವಾಗ ಜನ ಇವರಿಗೆ ಯಾಕೆ ಆಶೀರ್ವಾದ ಮಾಡುತ್ತಾರಾ?’ ಎಂದು ಪ್ರಶ್ನಿಸಿದರು.
‘ಈ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲು ಅನುಮತಿ ನಿರಾಕರಿಸಿ ಮುಖ್ಯ ಕಾರ್ಯದರ್ಶಿ ಪತ್ರ ಬರೆಯುತ್ತಾರೆ. ಆದರೆ ಸಾವಿರಾರು ಜನ ಸೇರಿಸಿ ಜನಾಶೀರ್ವಾದ ಯಾತ್ರೆ ಮಾಡಲು ಅನುಮತಿ ನೀಡುತ್ತಾರೆ. ಕೋವಿಡ್ ಮೂರನೇ ಅಲೆ ಬಂದರೆ, ಅದರಿಂದ ಅನಾಹುತ ಆದರೆ ಅದಕ್ಕೆಲ್ಲ ಈ ನಾಲ್ಕು ಜನ ಕೇಂದ್ರ ಸಚಿವರೇ ಹೊಣೆಯಾಗುತ್ತಾರೆ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಗೃಹ ಸಚಿವರ ಹೆಗಲ ಮೇಲಿದೆ. ಬಿಜೆಪಿ ಮಾಜಿ ಸಚಿವರು ನಾಡ ಬಂದೂಕಿನಿಂದ ಗುಂಡು ಹಾರಿಸಲು ಅವಕಾಶ ಕೊಟ್ಟಿದ್ದು ಯಾರು? ಅದು ಎಲ್ಲಿಂದ ಬಂತು? ಇದನ್ನು ಗೃಹ ಸಚಿವರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಸಮರ್ಥನೆಗೆ ಮುಂದಾಗಿ, ಬಿಹಾರ ಹಾಗೂ ಉತ್ತರ ಪ್ರದೇಶದ ಸಂಸ್ಕೃತಿಯನ್ನು ತರಲು ಮುಂದಾಗಬಾರದು. ನಮ್ಮದು ಶಾಂತಿ ಪ್ರಿಯ ರಾಜ್ಯ. ಇದನ್ನು ನೋಡಿ ಬೇರೆಯವರು ಕಲಿಯ ಬಾರದು. ಮೊದಲ ಬಾರಿಗೆ ಸಚಿವರಾಗಿರುವ ಗೃಹಮಂತ್ರಿಗಳು ಕಾನೂನು ಪುಸ್ತಕ ಓದಬೇಕು’ ಎಂದು ಟೀಕಿಸಿದರು.


















