ಕಲಾವಿದರ ಉಚಿತ ಲಸಿಕಾ ಶಿಬಿರಕ್ಕೆ ಶಾಸಕ ವೇದವ್ಯಾಸ ಕಾಮತ್ ಚಾಲನೆ
ಮಂಗಳೂರು : ಜಿಲ್ಲೆಯ ಜನರು ಗಾಬರಿ ಪಡುವ ಅಗತ್ಯವಿಲ್ಲ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಹಂತ ಹಂತವಾಗಿ ಎರಡು ಮೂರು ತಿಂಗಳ ಒಳಗೆ ಲಸಿಕೆ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಹೇಳಿದರು.



ಅವರು ತುಳು ನಾಟಕ ಕಲಾವಿದರ ಒಕ್ಕೂಟ (ರಿ), ಮಂಗಳೂರು ಇವರ ಆಶ್ರಯದಲ್ಲಿ ಬುಧವಾರ ಕದ್ರಿ ಗೋಕುಲ್ ಸಭಾಂಗಣದಲ್ಲಿ ಜಿಲ್ಲಾಡಳಿತ ಕಲಾವಿದರಿಗೆ ನೀಡಿರುವ ಉಚಿತ ಲಸಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.




ಕೋವಿಡ್ ಲಾಕ್ ಡೌನ್ ನಿಂದಾಗಿ ಕಲಾವಿದರ ಬದುಕು ಕೂಡ ದುಸ್ತರವಾಗಿದೆ. ಜನರಿಗೆ ಮನರಂಜನೆ ನೀಡುವುದು ಕಲಾವಿದರ ದೊಡ್ಡ ಕೊಡುಗೆಯಾಗಿದೆ. ಇಂತಹ ಕಲಾವಿದರಿಗೆ ಜಿಲ್ಲಾಡಳಿತ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಕಲಾವಿದರು ಹಾಗೂ ಅವರ ಮನೆಯವರಿಗೆ ಉಚಿತವಾಗಿ ಲಸಿಕೆ ನೀಡುವ ವ್ಯವಸ್ಥೆ ಮಾಡಿದೆ. ಕಲಾವಿದರ ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಶಾಸಕ ಕಾಮಾತ್ ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮನಪಾ ಸದಸ್ಯ ಕದ್ರಿ ಮನೋಹರ್ ಶೆಟ್ಟಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ಉಪಾಧ್ಯಕ್ಷ ಗೋಕುಲ್ ಕದ್ರಿ, ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರ್, ಕೋಶಾಧಿಕಾರಿ ಮೋಹನ್ ಕೊಪ್ಪಳ, ಸಂಘಟನಾ ಕಾರ್ಯದರ್ಶಿ ಮಧು ಬಂಗೇರಾ ಕಲ್ಲಡ್ಕ, ಕ್ಷೇಮಾಭಿವೃದ್ಧಿ ಸಂಚಾಲಕ ಪ್ರದೀಪ್ ಆಳ್ವ ಮುಂತಾದವರು ಉಪಸ್ಥಿತರಿದ್ದರು.

















