ತುಳುನಾಡ ರಕ್ಷಣಾ ವೇದಿಕೆಯಿಂದ ಆಹಾರ ವಿತರಣೆ
ಮಂಗಳೂರು: ಸಮಾಜ ಸೇವೆಗೆ ವಿವಿಧ ಮುಖಗಳು. ಕಷ್ಟ ಕಾರ್ಪಣ್ಯಗಳಿಗೆ ಆಸರೆಯಾಗುವುದರೊಂದಿಗೆ ಸಂತ್ರಸ್ತರಾದವರಲ್ಲಿ ಆತ್ಮ ಸ್ಥೈರ್ಯ ಮೂಡಿಸುವುದೂ ಸಮಾಜಮುಖೀ ಕಾರ್ಯವೆನಿಸುತ್ತದೆ’ ಎಂದು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದಲ್ಲಿ ಕೋವಿಡ್ ಸಂತ್ರಸ್ತರಿಗಾಗಿ ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅನ್ನದಾನದ 52 ನೇ ದಿನದ ಕಾರ್ಯಕ್ರಮದ ಅಂಗವಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಆಹಾರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಮಹಾಮಾರಿಯಿಂದಾಗಿ ಅನ್ನಾಹಾರವಿಲ್ಲದೆ ಪರದಾಡುತ್ತಿರುವ ದಿಕ್ಕಿಲ್ಲದವರಿಗೆ ಕಳೆದ 52 ದಿನಗಳಿಂದ ನಿರಂತರ ರುಚಿಕಟ್ಟಾದ ಆಹಾರ ಮತ್ತು ಪಡಿತರ ಕಿಟ್ ವಿತರಿಸುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯ ಇತರಿಗೆ ಮಾದರಿಯಾದುದು. ಹಸಿದವರಿಗೆ ಅನ್ನ ನೀಡುವುದು ಶ್ರೇಷ್ಠ ಕಾರ್ಯ. ಇದು ನಿಜವಾದ ಮಾನವ ಸೇವೆ’ ಎಂದವರು ಹೇಳಿದರು.

ಸಾಮಾಜಿಕ ಹೋರಾಟಗಾರ ಹಾಗೂ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರು ಮಾತನಾಡಿ ತುರವೇ ಗೌರವಾಧ್ಯಕ್ಷರಾದ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ರವರ ಮಾರ್ಗದರ್ಶನದಲ್ಲಿ ವಿಶೇಷ ಪ್ರೋತ್ಸಾಹ ಸಹಕಾರ ನೀಡುತ್ತಿರುವ ಫ್ರಾನ್ಸಿಸ್ ರಸ್ಕಿನ್ ರವರ ನೆರವಿನಿಂದ ಪ್ರತಿ ದಿನದಂತೆ 52 ನೇ ದಿನದ ಅನ್ನದಾನವನ್ನು ಕೂಡ ಹಸಿದವರಿಗೆ ಅನ್ನ ಬಡಿಸುವ ಮೂಲಕ ಮಾಡಲಾಗಿದೆ. ಸುಮಾರು ೬೦೦ ಚಿಕನ್ ಗ್ರೀನ್ ಮಸಾಲ ಇಡ್ಲಿ ಆಹಾರ ಕಿಟ್ ವಿತರಿಸಲಾಯಿತು ಎಂದರು.


















