ಕರಾವಳಿ ಭಾಗದಲ್ಲಿ ಘಟನಾವಳಿ ಆಧಾರದಲ್ಲಿ ಕಾರ್ಯಪಡೆ ರಚನೆ : ಡಾ. ಜಿ ಪರಮೇಶ್ವರ್

ಉಡುಪಿ: ಕರಾವಳಿ ಭಾಗದಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕೋಮು ಸಂಘರ್ಷಗಳ ತಡೆಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಯಾವುದೇ ಜಿಲ್ಲೆಯನ್ನ ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ನಾವು ಇದನ್ನು ಮಾಡಿಲ್ಲ. ಇದರ ಅಗತ್ಯವೂ ಎಲ್ಲೂ ಬರಬಾರದೆಂದು ಈಗಾಗಲೇ ಹೇಳಿದ್ದೇನೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಸಂಜೆ ಕೊಲ್ಲೂರಿನಲ್ಲಿ ವಾಸ್ತವ್ಯ ಮಾಡಿದ್ದ ಡಾ.ಪರಮೇಶ್ವರ್ ಇಂದು ಬೆಳಗ್ಗೆ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉಡುಪಿಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಶೇಷ ಕಾರ್ಯ ಪಡೆಗೆ ಉಡುಪಿ ಜಿಲ್ಲೆಯ ಸೇರ್ಪಡೆಯನ್ನು ವಿರೋಧಿಸಿ ಶಾಸಕ ಯಶ್‌ಪಾಲ್ ಸುವರ್ಣ ಅವರು ನೀಡಿರುವ ಹೇಳಿಕೆಗೆ ಗೃಹ ಸಚಿವರು ಪ್ರತಿಕ್ರಿಯಿಸಿದರು.
ಈ ಪಡೆಯ ಉಪಯೋಗ ಆಗದಿರುವಂತೆ ನೋಡಿಕೊಳ್ಳಿ ಅಂತ ಸಾರ್ವಜನಿಕರಿಗೂ ನಾನು ಮನವಿ ಮಾಡಿದ್ದೇನೆ. ಕೋಮುವಾದಕ್ಕೆ ಸಂಬಂಧಪಟ್ಟ ಘಟನೆ ನಡೆಯದಿದ್ದಲ್ಲಿ ಈ ಕಾರ್ಯಪಡೆ ಅಗತ್ಯ ಬರೋದಿಲ್ಲ. ಅಗತ್ಯ ಇದೆ ಇಲ್ಲ ಅನ್ನೋದನ್ನ ಸಾರ್ವಜನಿಕರೇ ನಿರ್ಧಾರ ಮಾಡಬೇಕು. ಇದರ ಅಗತ್ಯ ಬರದಿದ್ದಲ್ಲಿ ಕೋಮುವಾದ ಸಂಪೂರ್ಣ ಹೋಗಿದೆ ಅಂತ ಅರ್ಥ ಅಲ್ವ ಎಂದವರು ನಗುತ್ತಾ ಪ್ರಶ್ನಿಸಿದರು.
ಕಮಿಷನರ್ ಅವರು ಕಾರ್ಯಪಡೆಯ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ನೋಡಿಕೊಳ್ತಾರೆ. ಐಜಿ ಅವರು ಮೂರು ಜಿಲ್ಲೆಗಳನ್ನು ಮಾನಿಟರ್ ಮಾಡ್ತಾರೆ ಎಂದರು.
ರಾಜ್ಯದಲ್ಲಿ ಮತ್ತೆ ಜಾತಿ ಜನಗಣತಿ ವಿಚಾರದ ಕುರಿತು ಉತ್ತರಿಸಿದ ಗೃಹ ಸಚಿವರು, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಸಂಪುಟ ತೀರ್ಮಾನ ಮಾಡಿದೆ. ಅನೇಕ ಸಮುದಾಯ, ಸಂಘ ಸಂಸ್ಥೆಗಳು ಜಾತಿ ಜನಗಣತಿಯಲ್ಲಿ ಅಂಕಿ ಅಂಶ ಸರಿಯಿಲ್ಲ ಎಂದು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಹೊಸ ಸಮೀಕ್ಷೆಗೆ ನಿರ್ಧರಿಸಲಾಗಿದೆ ಎಂದರು.
ಜನಗಣತಿಯಲ್ಲಿ ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಇದೆ . ಜಾತಿ ಜನಗಣತಿ ಯಲ್ಲಿ ಹತ್ತು ವರ್ಷದ ಹಳೆಯ ಡೇಟಾ ಇದೆ ಎಂದು ಬಹಳಷ್ಟು ಮಂದಿ ಆಕ್ಷೇಪ ಎತ್ತಿದ್ದಾರೆ. ಅಲ್ಲದೇ ಕಳೆದ ಹತ್ತು ವರ್ಷಗಳಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಸೇರ್ಪಡೆ ಆಗಿರೋದು ಗಣನೆಗೆ ತೆಗೆದುಕೊಳ್ಳಲು ಸಲಹೆ ಬಂದಿತ್ತು. ಇದನ್ನು ಪರಿಗಣಿಸಿ ಮರು ಜಾತಿ ಜನಗಣತಿಗೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಮರು ಸಮೀಕ್ಷೆಯನ್ನು ಸಮರ್ಥಿಸಿಕೊಂಡರು.