ಮಂಗಳೂರು : ಕುಸಿದುಬಿದ್ದ ಆವರಣ ಗೋಡೆ – ಹಲವು ದ್ವಿಚಕ್ರ ವಾಹನಗಳು ಜಖಂ

ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆ ಹಿನ್ನೆಲೆಯಲ್ಲಿ ಮಂಗಳೂರು ನಗರದ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಕ್ಯೂಟ್ ಹೌಸ್ – ಬಿಜೈ ಬಳಿ ತಡರಾತ್ರಿ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದೆ.

ನಗರದ ಮೇರಿಹಿಲ್ ಸಮೀಪದಲ್ಲಿ ತಡೆಗೋಡೆ ಕುಸಿದ ಪರಿಣಾಮ ಪಕ್ಕದಲ್ಲಿದ್ದ ಬೈಕ್ ಹಾಗೂ ಕಾರು ಜಖಂಗೊಂಡಿದೆ. ಸಮೀಪದಲ್ಲಿಯೇ ಗ್ಯಾರೇಜ್ ನ ವಾಹನಗಳನ್ನ ತಡೆಗೋಡೆ ಪಕ್ಕದಲ್ಲಿಯೇ ನಿಲ್ಲಿಸಲಾಗಿದ್ದು, ಮಳೆ ಪರಿಣಾಮ ತಡೆಗೋಡೆ ಕುಸಿದು, 1 ಕಾರು, ಹಲವಾರು ಬೈಕ್ ಹಾನಿಗೊಂಡಿದೆ.

ಬಜಪೆಯ ಕರಂಬಾರು ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಿಂದಾಗಿ ಸಾಕಷ್ಟು ತೊಂದರೆ ಆಗಿದೆ.



ದ.ಕ.ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಬುಧವಾರ ರಾತ್ರಿ ಬಿರುಸು ಪಡೆದ ಮಳೆ ಈಗಲೂ ಮುಂದುವರಿದಿದೆ. ಕೆಲವಡೆ ಮನೆಗಳಿಗೂ ಹಾನಿಯಾಗಿದೆ. ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು ಬುಧವಾರ ರಾತ್ರಿ ಬಿಜೈ ಬಟ್ಟಗುಡ್ಡ, ಆರ್ಯಸಮಾಜ ರಸ್ತೆ, ಪಂಪ್‌ವೆಲ್ , ಮಾಲೆಮಾರ್, ಕಾವೂರು ಉಲ್ಲಾಸ ನಗರ, ಕೊಟ್ಟಾರ ಚೌಕಿ ಮತ್ತಿತರ ಕಡೆಗಳಲ್ಲಾದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇನ್ನು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಂ 75 ರ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ, ಗುಡ್ಡ ಕುಸಿದಿದ್ದು ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುತ್ತದೆ. ಈಗಾಗಲೇ ಮಣ್ಣು ತೆಗೆಯುವ ಕಾರ್ಯ ಆರಂಭವಾಗಿರುತ್ತದೆ. ಇನ್ನಷ್ಟು ಮಣ್ಣು ಕುಸಿಯುತ್ತಿದ್ದು, ಮಣ್ಣು ತೆಗೆಯುವ ಕಾರ್ಯ ಮಧ್ಯಾಹ್ನದವರೆಗೆ ಇರುವುದರಿಂದ, ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಗಿ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.
