ಕುಂದಾಪುರ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸಾವು

ಸುಳ್ಸೆ ಯಕ್ಷಿಬ್ರಹ್ಮ ನಂದಿಕೇಶ್ವರ ದೈವಸ್ಥಾನ ಸಮೀಪದ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55) ಪತ್ನಿ ಲಕ್ಷ್ಮೀ ದೇವಾಡಿಗ (49) ಮೃತಪಟ್ಟ ದಂಪತಿಗಳು. ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದು, ಶುಕ್ರವಾರ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಕಳೆದರೂ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಪತ್ನಿ ಲಕ್ಷ್ಮೀ ಅನುಮಾನಗೊಂಡು ಕರಣಿಕರ ಮನೆಗೆ ತೆರಳಿದ್ದರು.

ಈ ವೇಳೆ ಕರಣಿಕರ ಮನೆಗೆ ಹೋಗುವ ಕಾಲುದಾರಿಯಲ್ಲಿ ಮುರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪತಿ ಬಿದ್ದಿರುವುದು ಲಕ್ಷ್ಮೀ ಗಮನಕ್ಕೆ ಬಂದಿದೆ. ತಕ್ಷಣವೇ ಪತಿಯನ್ನು ರಕ್ಷಿಸಲು ಸ್ಥಳೀಯರಲ್ಲಿ ನೆರವಿಗೆ ಬರುವಂತೆ ಕೂಗತೊಡಗಿದಾಗ ಸಮೀಪದ ಮನೆಯರು ಬರುವಷ್ಟರಲ್ಲಾಗಲೇ ಮಳೆ ನೀರಿನಿಂದ ಒದ್ದೆಯಾದ ಮರದ ಕೋಲಿನಲ್ಲಿ ರಕ್ಷಣೆಗೆ ಧಾವಿಸಿದ ಪರಿಣಾಮ ಲಕ್ಷ್ಮೀಯವರಿಗೂ ವಿದ್ಯುತ್ ಪ್ರವಹಿಸಿ ಅವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃದು ಸ್ವಭಾವದ, ಮೆಲುಮಾತಿನ ಮಹಾಬಲ ದೇವಾಡಿಗ ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಸೌಕೂರಿನ ಪತ್ನಿಯ ಮನೆಯಲ್ಲಿ ವಾಸವಿದ್ದು, ದಿನಾಲು ಸುಳ್ಸೆಗೆ ಬಂದು ಮನೆ ಸಮೀಪದ ಯಕ್ಷೀ ಬ್ರಹ್ಮ ನಂದೀಕೇಶ್ವರ ದೈವಸ್ಥಾನದಲ್ಲಿ ದೇವರಿಗೆ ನೀರಿಟ್ಟು ಪೂಜೆ ನೆರವೇರಿಸಿದ ಬಳಿಕ ಕೆಲಸಕ್ಕೆ ತೆರಳುತ್ತಿದ್ದರು.

ಗುರುವಾರ ತಾವು ಕೆಲಸ ನಿರ್ವಹಿಸುವ ಕರಣಿಕರ ಮನೆಯಲ್ಲಿ ಅನಂತ ಚತುರ್ದಶಿಯ ಪ್ರಯುಕ್ತ ಪೂಜಾ ಕೈಂಕರ್ಯಗಳಿದ್ದ ಹಿನ್ನೆಲೆ ಮರು ದಿನ ಶುಕ್ರವಾರ ಮನೆ ಶುಚಿಗೊಳಿಸಿ ತಮ್ಮ ಮನೆಗೆ ವಾಪಾಸಾಗುತ್ತಿದ್ದಾಗ ಈ ದುರಂತ ನಡೆದಿದೆ ಎನ್ನಲಾಗಿದೆ. ಮೃತ ಮಹಾಬಲ ದೇವಾಡಿಗ ಹಾಗೂ ಲಕ್ಷ್ಮೀ ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಪುತ್ರ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪುತ್ರಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದಾಳೆ.

ಮೆಸ್ಕಾಂ ಇಲಾಖೆಯ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾಬಲ ದೇವಾಡಿಗ ಅವರು ಸಾವನ್ನಪ್ಪಿದ ಕಾಲು ದಾರಿಯ ಮಧ್ಯೆ ಎರಡು ವಿದ್ಯುತ್ ತಂತಿ ಹಾದು ಹೋಗಿದ್ದು, ಅನೇಕ ಕಡೆಗಳಲ್ಲಿ ತುಂಡಾದ ತಂತಿಗಳನ್ನು ಜೋಡಿಸಲಾಗಿದೆ. ಎರಡು ತಂತಿಯಲ್ಲಿ ಒಂದು ತಂತಿ ತುಂಡಾಗಿ ಬಿದ್ದಿದ್ದು, ಇದೇ ತಂತಿ ತಗುಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಶಾಲಾ ಮಕ್ಕಳೂ ಸೇರಿದಂತೆ ಈ ಭಾಗದ ಜನರು ಹೆಮ್ಮಾಡಿ ಪೇಟೆಗೆ ಬರಲು ಇದೇ ದಾರಿ ಅವಲಂಭಿಸಿದ್ದು, ಈ ದಾರಿಯ ಮೇಲೆ ಹಾದು ಹೋಗುವ ವಿದ್ಯುತ್ ತಂತಿ ಅನೇಕ ಬಾರಿ ಮುರಿದಿದ್ದು, ಮತ್ತೆ ಮತ್ತೆ ಜೋಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮೆಸ್ಕಾಂ ಇಲಾಖೆಯ ನಿರ್ಲಕ್ಷವನ್ನು ಸೂಕ್ತ ತನಿಖೆ ನಡೆಸಿ ಇಲಾಖೆಯಿಂದ ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಪಂಚಾಯತ್ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ನಾಗರಾಜ್ ಪುತ್ರನ್, ಮಾಜಿ ಸದಸ್ಯ ಶೇಖರ ಬಳೆಗಾರ್, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ್ ಗೌಡ ಭೇಟಿ ನೀಡಿದ್ದಾರೆ.

Related Posts

Leave a Reply

Your email address will not be published.