ಮಂಗಳೂರು: ಪಾಳು ಬಿದ್ದಿರುವ ಮನೆ, ಒಂಟಿ ಜೀವನ: ಮಹಿಳೆಗೆ ಬೇಕಿದೆ ನೆರವಿನ ಹಸ್ತ
ಪಾಳು ಬಿದ್ದಂತಿರುವ ಮನೆಯಲ್ಲಿ ಆಕೆಯದ್ದು ಒಂಟಿ ಜೀವನ. ದಿನದ ತುತ್ತಿಗೂ ನಿತ್ಯದ ಪರದಾಟ. ನಗರದ ಮಧ್ಯ ಭಾಗದಲ್ಲೇ ಇದ್ರೂ, ಯಾರೊಬ್ಬರ ಸಹಾಯವೂ ದೊರಕುತ್ತಿಲ್ಲ. ಸರಕಾರದ ಸವಲತ್ತೂ ಅಷ್ಟೇ, ಈ ತಾಯಿಯ ಕೈಗೆ ಎಟುಕಿಲ್ಲ. ಅಷ್ಟೊಂದು ಶೋಚನೀಯವಾಗಿ ಬದುಕುವ ಈ ಮಹಿಳೆಯ ಕಥೆ ಕೇಳಿದ್ರೆ ಕಣ್ಣೀರು ತರಿಸುವಂತಿದೆ.

ಹೌದು, ಯಾವಾಗ ಬೀಳುತ್ತೋ ಅನ್ನುವ ಸ್ಥಿತಿಯಲ್ಲಿರುವ ಮನೆ…ಆ ಮನೆಯಲ್ಲಿಯೇ ಜೀವನ ಸಾಗಿಸಿಕೊಳ್ಳುತ್ತಿರುವ ಹಿರಿಯ ಜೀವ.. ಇವ್ರ ಹೆಸ್ರು ಯಶೋಧಾ.. ಕಳೆದ ೬೦ ವರ್ಷಗಳಿಂದ ಈ ಮನೆಯಲ್ಲಿಯೇ ಜೀವನ ಸಾಗಿಸಿಕೊಳ್ಳುತ್ತಿದ್ದಾರೆ. ತನ್ನ ತಾಯಿ ಮೃತಪಟ್ಟ ಬಳಿಕ ೧೦ ವರ್ಷಗಳಿಂದ

ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಅಂದಹಾಗೆ ಇವ್ರು ಇರೋದು ಮಂಗಳೂರಿನ ಹೃದಯಭಾಗವಾದ ಕದ್ರಿಯ ಶಿವಭಾಗ್ ನ ೫ನೇ ಕ್ರಾಸ್ ನಲ್ಲಿ.

ಮಣ್ಣಿನಲ್ಲಿ ನಿರ್ಮಾಣಗೊಂಡಿರುವ ಈ ಮನೆಯ ಗೋಡೆಗಳು ಈಗಾಗಲೇ ಬಿದ್ದು ಹೋಗಿವೆ. ಪಕ್ಕಾಸು ಹಾಗೂ ಬಾಗಿಲು ಕೂಡ ಮುರಿದು ಹೋಗಿದೆ. ಹಾವು ಬರುತ್ತೆ ಎಂಬ ಭಯದಿಂದ ರಾತ್ರಿ ಹೊತ್ತು ಸರಿಯಾಗಿ ನಿದ್ದೆಯಿಲ್ಲ, ಮಾತ್ರವಲ್ಲದೇ ಮನೆಯ ಸುತ್ತಲೂ ಪೊದೆ ಆವರಿಸಿಕೊಂಡಿದೆ. ಮನೆಯ ಪಕ್ಕದಲ್ಲಿ ಬಾವಿ ಇದ್ದು,
ಮಳೆ ನೀರು ತುಂಬಿ ಮನೆಗೆ ಬಂದು ಬಿಡುತ್ತೆ ಎಂಬ ಭಯ ಇವರಲ್ಲಿ ಕಾಡುತ್ತಲೇ ಇದೆ. ಮನೆಯೂ ಸಂಪೂರ್ಣವಾಗಿ ಕೆಟ್ಟು ಹೋಗಿವೆ, ಯಾವಾಗ ಬೀಳುತ್ತೋ ಎನ್ನುವ ಆತಂಕದಲ್ಲೇ ಯಶೋಧಾ ಅವ್ರು ಕಾಲ ಕಳೆಯುವಂತಾಗಿದೆ.
ದಿನಕ್ಕೆ ಒಂದು ಊಟ, ಅದಕ್ಕೂ ದೇಗುಲವೇ ಗತಿ!
ಯಶೋಧಾ ಅವರು ಕಳೆದ ಹಲವಾರು ವರ್ಷಗಳಿಂದ ಕದ್ರಿ ದೇವಸ್ಥಾನದಲ್ಲೇ ಒಂದೊತ್ತಿನ ಅನ್ನ ಪ್ರಸಾದವನ್ನ ಸ್ವೀಕರಿಸಿ ದಿನ ಕಳೆಯುತ್ತಾ ಬಂದಿದ್ದಾರೆ. ಮತ್ತೊಂದು ಊಟಕ್ಕೆ ಮತ್ತದೇ ಮರುದಿನದ ಅನ್ನಪ್ರಸಾದಕ್ಕೆ ಕಾಯಬೇಕು. ಮನೆಯಲ್ಲೂ ಊಟದ ವ್ಯವಸ್ಥೆ ಮಾಡಿಕೊಳ್ಳುವಷ್ಟು ಸಾಮರ್ಥ್ಯವೂ ಇಲ್ಲ. ಯಾಕೆಂದರೆ ಹಣಕಾಸಿನ ಕೊರತೆ ಕಾಡುತ್ತಿದೆ. ಮನೆಯಲ್ಲಿರುವ ಗ್ಯಾಸ್ ಅನ್ನು ಕಳೆದ ಒಂದು ವರ್ಷದಿಂದ ಇತಿಮಿತಿಯಲ್ಲಿ ಕೇವಲ ಬಿಸಿ ನೀರು ಕಾಯಿಸಲಷ್ಟೇ ಬಳಸುತ್ತಾರೆ. ಇವ್ರಿಗೆ ಸರ್ಕಾರದ ಗೃಹಲಕ್ಷ್ಮೀ ಹೊರತು ಬೇರೆ ಯಾವುದೇ ಸವಲತ್ತು ಸಿಗುತ್ತಿಲ್ಲ, ಅದೂ ಬರೋದೇನು ತಡವಾದ್ರೆ ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ.
ನೋಡಿದ್ರಲ್ಲ ಮಂಗಳೂರು ನಗರದಲ್ಲಿ ಶೋಚನೀಯ ಸ್ಥಿತಿಯಲ್ಲಿ ಜೀವನ ಸಾಗಿಸಿಕೊಳ್ಳುತ್ತಿರುವ ಯಶೋಧ ಅವರ ಸಂಕಷ್ಟದ ಕಥೆ. ಯಶೋಧಾ ಅವರಿಗೆ ಸರಕಾರ, ಸಂಘ ಸಂಸ್ಥೆಗಳ ನೆರವು ಅಗತ್ಯವಾಗಿ ಬೇಕಾಗಿದೆ. ಇದಕ್ಕಾಗಿ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.

















